ರಾಷ್ಟ್ರೀಯ

ನನಗೆ ಆತ್ಮಹತ್ಯೆ ಮಾಡಿಕೊಳ್ಳಲು ಅನುಮತಿ ನೀಡಿ ಎಂದು ರಾಷ್ಟ್ರಪತಿಗೆ ಪತ್ರ ಬರೆದ ಬಾಲಕ! ಕಾರಣ ವಿಚಿತ್ರ ….

Pinterest LinkedIn Tumblr

ಪಟನಾ: ಬಿಹಾರದ 15 ವರ್ಷದ ಬಾಲಕನೊಬ್ಬ ಜೀವನವನ್ನು ಕೊನೆಗಾಣಿಸಿಕೊಳ್ಳಲು ಅನುಮತಿ ನೀಡುವಂತೆ ಕೋರಿ ರಾಷ್ಟ್ರಪತಿ ರಾಮನಾಥ ಕೋವಿಂದ ಅವರಿಗೆ ಪತ್ರ ಬರೆದಿದ್ದಾನೆ. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ನಡೆಸುವಂತೆ ಪ್ರಧಾನ ಮಂತ್ರಿ ಕಾರ್ಯಾಲಯ ಬಿಹಾರ ಪೊಲೀಸರಿಗೆ ಸೂಚನೆ ನೀಡಿದೆ.

ಪಾಲಕರ ನಿರಂತರ ಜಗಳದಿಂದ ಬೇಸತ್ತು, ತೀವ್ರ ಮಾನಸಿಕ ಯಾತನೆ ಅನುಭವಿಸುತ್ತಿದ್ದೇನೆ. ಇದರಿಂದ ನನ್ನ ಓದಿನ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಪಾಲಕರ ನಡುವಿನ ಜಗಳ ಇತ್ತೀಚೆಗೆ ತಾರಕಕ್ಕೇರಿದ್ದು, ಇತ್ತೀಚೆಗೆ ನನ್ನ ತಾಯಿಯ ಸೂಚನೆ ಮೇರೆಗೆ ಕೆಲವು ರೌಡಿಗಳು ತಂದೆಗೆ ಬೆದರಿಕೆ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ನನಗೆ ಅನುಮತಿ ನೀಡಬೇಕು ಎಂದು ಕೋರಿ ಬಿಹಾರದ ಭಗಲ್​ಪುರ ಜಿಲ್ಲೆಯ ಬಾಲಕ ರಾಷ್ಟ್ರಪತಿಗೆ ಪತ್ರ ಬರೆದಿದ್ದ.

ಬಾಲಕನ ತಂದೆ ಮತ್ತು ತಾಯಿ ಇಬ್ಬರೂ ಸರ್ಕಾರ ನೌಕರರಾಗಿದ್ದು, ತಂದೆ ಜಾರ್ಖಂಡ್​ನ ದಿಯೋಗರ್​ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆ, ತಾಯಿ ಬಿಹಾರದ ಪಟನಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಾಲಕನ ಪಾಲಕರು ಸದಾ ಜಗಳವಾಡುತ್ತಿದ್ದು, ಪರಸ್ಪರರ ಮೇಲೆ ಅಕ್ರಮ ಸಂಬಂಧ ಹೊಂದಿರುವ ಆರೋಪ ಹೊರೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಲಕ ಭಗಲ್​ಪುರದಲ್ಲಿರುವ ತನ್ನ ಅಜ್ಜನ ಮನೆಯಲ್ಲಿ ವಾಸಿಸುತ್ತಿದ್ದಾನೆ ಎಂದು ವರದಿಯಾಗಿದೆ.

ಬಾಲಕನ ಪತ್ರ ರಾಷ್ಟ್ರಪತಿಗಳಿಗೆ ತಲುಪಿದ ನಂತರ ಪ್ರಧಾನ ಮಂತ್ರಿ ಕಾರ್ಯಾಲಯ ಭಗಲ್​ಪುರ ಜಿಲ್ಲಾಡಳಿತಕ್ಕೆ ಪ್ರಕರಣದ ಕುರಿತು ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದೆ.

Comments are closed.