ನವದೆಹಲಿ: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡುವಂತೆ ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ನಾಯಕಿ ಮಾಯವತಿ ಅವರು, ಪಕ್ಷದ ಏಕೈಕ ಶಾಸಕ ಎನ್.ಮಹೇಶ್ ಅವರಿಗೆ ಸೂಚನೆ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮಾಯಾವತಿ ಅವರು, ಸೋಮವಾರ ನಡೆಯಲಿರುವ ವಿಶ್ವಾಸ ಮತಯಾಚನೆ ವೇಳೆ ಮೈತ್ರಿ ಸರ್ಕಾರದ ಪರವಾಗಿ ಮತ ಹಾಕಿ ಎಂದು ನಿರ್ದೇಶನ ನೀಡಿದ್ದಾರೆ.
ಮಾಯಾವತಿ ಅವರ ಈ ನಿರ್ಧಾರದಿಂದ ದೋಸ್ತಿ ನಾಯಕರಿಗೆ ಸ್ವಲ್ಪ ರಿಲೀಫ್ ಸಿಕ್ಕಿದೆ. ಇನ್ನು ಉಳಿದ ಅತೃಪ್ತ ಶಾಸಕರ ಮನವೊಲಿಸಲು ಸಿಎಂ, ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಅನೇಕ ನಾಯಕರು ಮುಂದಾಗಿದ್ದಾರೆ.
ಇದಕ್ಕೂ ಮುನ್ನ ಮಾಧ್ಯಮಗಳ ಜೊತೆಗೆ ಮಾತನಾಡಿದ್ದ ಶಾಸಕ ಎನ್.ಮಹೇಶ್ ಅವರು, ಮೈತ್ರಿ ಸರ್ಕಾರವು ಸೋಮವಾರ ವಿಶ್ವಾಸ ಮತಯಾಚಿಸುತ್ತಿದೆ. ಈ ಕುರಿತು ಚರ್ಚೆಗಳೆಲ್ಲ ಮುಗಿದ ನಂತರದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅವರು ಮತ ವಿಭಜನೆಗೆ ಹಾಕಿದಾಗ ನಾನು ಕಲಾಪಕ್ಕೆ ಗೈರು ಹಾಜರಾಗುತ್ತೇನೆ ಎಂದು ಹೇಳಿದ್ದರು.
ದೋಸ್ತಿ ಸರ್ಕಾರವನ್ನು ಬೆಂಬಲಿಸಬೇಕೆ, ಬೇಡವೇ ಎಂಬ ವಿಚಾರವಾಗಿ ಪಕ್ಷದ ಮುಖಂಡರಿಂದ ತಮಗೆ ಯಾವುದೇ ಸೂಚನೆ ಬಂದಿಲ್ಲ. ಹೀಗಾಗಿ ಈ ನಿರ್ಧಾರಕ್ಕೆ ಬಂದಿರುವೆ ಎಂದು ಹೇಳಿದ್ದರು. ಶಾಸಕರ ಹೇಳಿಕೆಯಿಂದ ಮೈತ್ರಿ ನಾಯಕರಲ್ಲಿ ಮತ್ತಷ್ಟು ಆತಂಕ ಮೂಡಿತ್ತು. ಈಗ ಹೈಕಮಾಂಡ್ನಿಂದ ಬೆಂಬಲ ನೀಡುವಂತೆ ಆದೇಶ ಬಂದಿದ್ದರಿಂದ ದೋಸ್ತಿ ನಾಯಕರು ಸ್ವಲ್ಪ ನೆಮ್ಮದಿಯ ಉಸಿರು ಬಿಟ್ಟಿದ್ದಾರೆ.
Comments are closed.