ನವದೆಹಲಿ:ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ, ಆರ್ಟಿಕಲ್ 370 ರದ್ದು ಮಾಡುವುದು ಹಾಗೂ ದೇಶದಲ್ಲಿ ಏಕರೂಪ ಸಮಾನ ನಾಗರಿಕ ನೀತಿ ಸಂಹಿತೆ ಜಾರಿಗೆ ತರುವುದು ಭಾರತೀಯ ಜನತಾ ಪಕ್ಷದ ರಾಜಕೀಯ ಅಜೆಂಡವಾಗಿತ್ತು. ಆದರೆ ಹಲವು ದಶಕಗಳ ಕಾಲ ಬಿಜೆಪಿ ಪ್ರಣಾಳಿಕೆಯಲ್ಲಿ ಸ್ಥಾನ ಪಡೆಯುತ್ತಿದ್ದ ಈ ವಿಷಯ ಕಾರ್ಯಗತಗೊಳಿಸಲು ಬಿಜೆಪಿಗೆ ಹೆಚ್ಚು ಅವಕಾಶ ಸಿಕ್ಕಿಲ್ಲವಾಗಿತ್ತು.
ಆದರೆ ಇದೀಗ ಎರಡನೇ ಬಾರಿ ಪೂರ್ಣ ಬಹುಮತದೊಂದಿಗೆ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಏರಿರುವ ಪ್ರಧಾನಿ ನರೇಂದ್ರ ಮೋದಿ ಸರಕಾರ ತ್ರಿವಳಿ ತಲಾಖ್, ಆರ್ಟಿಕಲ್ 370 ಅನ್ನು ರದ್ದು ಮಾಡಿದೆ.
ಜಮ್ಮು-ಕಾಶ್ಮೀರ ಪುನರ್ ರಚನೆ ವಿಧೇಯಕ ಸೋಮವಾರ ರಾಜ್ಯಸಭೆ, ಲೋಕಸಭೆಯಲ್ಲಿ ಅಂಗೀಕಾರಗೊಂಡಿದೆ. ತ್ರಿವಳಿ ತಲಾಖ್ ನಿಷೇಧಿಸಿದ ಒಂದು ವಾರದೊಳಗೆ ಕೇಂದ್ರ ಸರಕಾರ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಕಲಂ 370ಅನ್ನು ರದ್ದು ಮಾಡಿದೆ. ಇದೀಗ ಕೇಂದ್ರದ ಮುಂದಿರುವ ಗುರಿ ಏಕರೂಪ ಸಮಾನ ನಾಗರಿಕ ಸಂಹಿತೆ ಎಂದು ವಿಶ್ಲೇಷಿಸಲಾಗುತ್ತಿದೆ. ಹಾಗಂತ ಇದು ತುಂಬಾ ಸುಲಭವಲ್ಲ ಎಂದೇ ಹೇಳಲಾಗುತ್ತಿದೆ. ಆದರೆ ಇದೇನು ಅಸಾಧ್ಯವಾದುದಲ್ಲ ಎಂಬುದು ಕಾನೂನು ತಜ್ಞರ ಅಭಿಪ್ರಾಯವಾಗಿದೆ.
ಇನ್ನು ಅಯೋಧ್ಯೆ ವಿಷಯ ಈಗಾಗಲೇ ಸುಪ್ರೀಂಕೋರ್ಟ್ ಅಂಗಳದಲ್ಲಿ ಅಂತಿಮ ಹಂತದಲ್ಲಿದೆ. ಮಂಗಳವಾರದಿಂದ ವಿಚಾರಣೆ ಆರಂಭವಾಗಲಿದೆ. ಧಾರ್ಮಿಕವಾಗಿ ಹಾಗೂ ರಾಜಕೀಯವಾಗಿ ಇದು ಸೂಕ್ಷ್ಮವಾದ ವಿಷಯವಾಗಿದೆ. ಸುಪ್ರೀಂನ ಅಂತಿಮ ತೀರ್ಪು ಏನಾಗಲಿದೆ ಎಂಬುದೇ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
Comments are closed.