ನವ ದೆಹಲಿ (ಆಗಸ್ಟ್.06); ಜಮ್ಮು-ಕಾಶ್ಮೀರದ ವಿಶೇಷಾಧಿಕಾರವನ್ನು ಕಸಿದುಕೊಳ್ಳುವ ಮೂಲಕ ಆಡಳಿತರೂಢ ಬಿಜೆಪಿ ಪಕ್ಷ ತನ್ನ ಕಾರ್ಯನಿರ್ವಾಹಕ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದೆ. ಅಲ್ಲದೆ, ಈ ಕ್ರಮವು ದೇಶದ ಭದ್ರತೆ ಸೇರಿದಂತೆ ಅನೇಕ ವಿಚಾರಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಕಾಂಗ್ರೆಸ್ ಪಕ್ಷದ ಮಾಜಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಸರ್ಕಾರ ಸೋಮವಾರ ಜಮ್ಮು ಮತ್ತು ಕಾಶ್ಮೀರ ಪುನಾರಚನೆ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಿತ್ತು. ಈ ವಿಧೇಯಕಕ್ಕೆ ಬಿಜೆಪಿಯ ಕಟು ವಿರೋಧಿ ಪಕ್ಷಗಳಾದ ಆಮ್ ಆದ್ಮಿ ಹಾಗೂ ಬಿಎಸ್ಪಿ ಬೆಂಬಲ ಸೂಚಿಸಿದರೆ, ಎನ್ಡಿಎ ಮಿತ್ರಪಕ್ಷವಾದ ಜೆಡಿಯು ಬಹಿರಂಗವಾಗಿ ತನ್ನ ವಿರೋಧವನ್ನು ವ್ಯಕ್ತಪಡಿಸಿತ್ತು.
ಆದರೆ, ಕಾಂಗ್ರೆಸ್ ಮಾತ್ರ ಈವರೆಗೆ ಈ ಕುರಿತ ತನ್ನ ನಿಲುವನ್ನು ಸ್ಪಷ್ಟಪಡಿಸಿರಲಿಲ್ಲ. ಇದೀಗ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರವಾಗಿ 24 ಗಂಟೆಯ ನಂತರ ಕೊನೆಗೂ ಕಾಶ್ಮೀರ ವಿಚಾರದಲ್ಲಿ ಸ್ಪಷ್ಟತೆಯನ್ನು ಕಂಡುಕೊಂಡಿರುವ ಕಾಂಗ್ರೆಸ್ ಬಿಜೆಪಿ ನಡೆಯನ್ನು ಕಟುವಾಗಿ ವಿರೋಧಿಸಿದೆ. ಅಲ್ಲದೆ, ಇಂದು ಟ್ವೀಟ್ ಮಾಡುವ ಮೂಲಕ ರಾಹುಲ್ ಗಾಂಧಿ ಕಾಶ್ಮೀರದ ವಿಚಾರದಲ್ಲಿನ ಬಿಜೆಪಿ ನಡೆಯ ವಿರುದ್ಧ ಹರಿಹಾಯ್ದಿದ್ದಾರೆ.
ಈ ಕುರಿತು ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿರುವ ಅವರು, “ಜಮ್ಮು-ಕಾಶ್ಮೀರ ರಾಜ್ಯವನ್ನು ಏಕಪಕ್ಷೀಯವಾಗಿ ಹರಿದುಹಾಕುವುದು, ಚುನಾಯಿತ ಪ್ರತಿನಿಧಿಗಳನ್ನು ಸೆರೆಹಿಡಿಯುವುದು ಮತ್ತು ನಮ್ಮ ಸಂವಿಧಾನವನ್ನು ಉಲ್ಲಂಘಿಸುವ ಕ್ರಮಗಳಿಂದ ರಾಷ್ಟ್ರೀಯ ಏಕೀಕರಣವನ್ನು ಸಾಧಿಸುವುದು ಸಾಧ್ಯವಾಗುವುದಿಲ್ಲ. ಈ ರಾಷ್ಟ್ರ ಜನರಿಂದ ನಿರ್ಮಾಣವಾಗಿದೆಯೇ ಹೊರತು ಜಮೀನುಗಳಿಂದಲ್ಲ” ಎಂದು ಕಿಡಿಕಾರಿದ್ದಾರೆ.
ಕಲಂ 370 ರದ್ದು, ಒಡೆದ ಮನೆಯಾಗಿರುವ ಕಾಂಗ್ರೆಸ್:
ಕೇಂದ್ರ ಸರ್ಕಾರ ಸೋಮವಾರ ರಾಜ್ಯಸಭೆಯಲ್ಲಿ ಕಲಂ 370 ಅನ್ನು ರದ್ದುಗೊಳಿಸುವ ಜಮ್ಮು ಮತ್ತು ಕಾಶ್ಮೀರ ಪುನಾರಚನೆ ಮಸೂದೆಯನ್ನು ಮಂಡಿಸಿದ ನಂತರ ಕಾಂಗ್ರೆಸ್ ಪಕ್ಷ ನಿಜಕ್ಕೂ ಒಡೆದ ಮನೆಯಂತಾಗಿದೆ.
ಕಾಂಗ್ರೆಸ್ ಹಿರಿಯ ನಾಯಕರಾದ ಗುಲಾಮ್ ನಭಿ ಆಜಾದ್ ಹಾಗೂ ಪಿ. ಚಿದಂಬರಂ ಅವರಂತಹ ನಾಯಕರು ಕೇಂದ್ರದ ನಿರ್ಣಯವನ್ನು ಕಟುವಾಗಿ ಖಂಡಿಸಿದ್ದರೆ, ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡ ಅವರ ಮಗ ಮಾಜಿ ಕಾಂಗ್ರೆಸ್ ಸಂಸದ ದೀಪೆಂದರ್ ಹೂಡ ಸರ್ಕಾರದ ಕ್ರಮವನ್ನು ಸ್ವಾಗತಿಸಿದ್ದಾರೆ. ಅಲ್ಲದೆ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಭುವನೇಶ್ವರ್ ಖಲಿತಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಯ ಕ್ರಮವನ್ನು ಬಹಿರಂಗವಾಗಿ ಬೆಂಬಲಿಸಿದ್ದಾರೆ.
ಪಕ್ಷದ ನಿರ್ಣಯಕ್ಕೆ ವಿರುದ್ಧವಾಗಿ ಅನೇಕ ಕಾಂಗ್ರೆಸ್ ನಾಯಕರು ಕೇಂದ್ರದ ನಿರ್ಣಯಕ್ಕೆ ಬಹಿರಂಗವಾಗಿ ಬೆಂಬಲ ಸೂಚಿಸಿರುವುದು, ಕಲಂ 370 ನಿಷೇಧದ ಕುರಿತು ಕಾಂಗ್ರೆಸ್ ಪಕ್ಷದೊಳಗೆ ಭಿನ್ನಾಭಿಪ್ರಾಯ ಭುಗಿಲೆದ್ದಿದೆ ಎಂಬ ಊಹಾಪೋಹಗಳಿಗೆ ಸಾಕ್ಷಿ ನುಡಿಯುತ್ತಿವೆ.
Comments are closed.