ನವದೆಹಲಿ: ಬೆಕ್ಕಿಗೆ ಕುತೂಹಲ ಜಾಸ್ತಿ. ನೀವು ಬೆಕ್ಕನ್ನು ಸಾಕಿ ನೋಡಿ ಅದು ನಾಯಿಯಂತೆ ಸುಮ್ಮನೆ ಇರುವುದಿಲ್ಲ. ಮನೆಯ ಮೂಲೆ ಮೂಲೆ ಹುಡುಕತ್ತ, ಕಿಲಾಡಿ ಮಾಡುತ್ತ ಇರುತ್ತದೆ.
ಹಾಗೆ ಇಲ್ಲೊಂದು ಬೆಕ್ಕಿನ ಕತೆ ಹೇಳುತ್ತೇವೆ ಕೇಳಿ. ತನ್ನ ಕುತೂಹಲ ತಣಿಸಿಕೊಳ್ಳಲು ಅಧಿಕಪ್ರಸಂಗತನ ಮಾಡಲು ಬೆಕ್ಕೊಂದು ಸಾವಿನ ದವಡೆಗೆ ಹೋಗಿ ಬಂದಿದೆ.
ಟ್ವಿಟರ್ನಲ್ಲಿ ಕಪ್ಪುಬೆಕ್ಕಿನ ನಾಲ್ಕು ಫೋಟೋಗಳು ವೈರಲ್ ಆಗುತ್ತಿವೆ. ಅದನ್ನು ನೋಡಿದರೆ ಪಾಪ ಎನ್ನಿಸುವ ಜತೆಗೆ ನಗುವೂ ಬಾರದೆ ಇರಲಾರದು.
ಮನೆಯ ಗೋಡೆಯೊಂದಕ್ಕೆ ಅಳವಡಿಸಿದ್ದ ಸ್ವಿಚ್ಬೋರ್ಡ್ನ್ನು ರಿಪೇರಿ ಮಾಡುವ ಕಾರ್ಯ ನಡೆಯುತ್ತಿತ್ತು. ಆ ಬೋರ್ಡ್ನ್ನು ಕಳಚಿ ಪಕ್ಕಕ್ಕೆ ಇಡಲಾಗಿತ್ತು. ಅಷ್ಟರಲ್ಲಿ ಎಲ್ಲೋ ಇದ್ದ ಆ ಮನೆಯ ಕಪ್ಪುಬೆಕ್ಕು ಸುಮ್ಮನೆ ಇರಲಾಗದೆ ಬೋರ್ಡ್ ಕಳಚಿಟ್ಟ ಕಿಂಡಿಯೊಳಗೆ ತಲೆ ತೂರಿಸಿದೆ. ಆಗ ಸಣ್ಣಪ್ರಮಾಣದಲ್ಲಿ ಶಾಕ್ ಹೊಡೆದಿದೆ. ಅದೃಷ್ಟವಶಾತ್ ಬೆಕ್ಕಿನ ಪ್ರಾಣ ಹೋಗಲಿಲ್ಲ. ಆದರೆ, ಅದರ ತಲೆಯ ಕೂದಲುಗಳೆಲ್ಲ ನೆಟ್ಟಗೆ ನಿಂತು ಕಾರ್ಟೂನ್ ಚಿತ್ರದಂತೆ ಕಾಣಿಸುತ್ತಿದೆ.. ಬೆಕ್ಕು ಫುಲ್ ಕಂಗಾಲಾಗಿದೆ.
ಇದನ್ನು ಟ್ವಿಟರ್ ಬಳಕೆದಾರರೊಬ್ಬರು ಶೇರ್ ಮಾಡಿಕೊಂಡಿದ್ದು, ಸ್ವಲ್ಪ ಹೆಚ್ಚುಕಡಿಮೆಯಾಗಿದ್ದರೂ ಈ ಬೆಕ್ಕು ತನ್ನ ಕುತೂಹಲದಿಂದಲೇ ಪ್ರಾಣ ಕಳೆದುಕೊಳ್ಳುತ್ತಿತ್ತು ಎಂದು ಪೋಸ್ಟ್ ಮಾಡಿದ್ದಾರೆ.
ಇದೊಂದು ಹಳೇ ಫೋಟೋ ಎನ್ನಲಾಗಿದ್ದು ಮೇ ತಿಂಗಳಲ್ಲೇ ಒಂದು ಬಾರಿ ಇನ್ಸ್ಟಾಗ್ರಾಂನಲ್ಲಿ ಶೇರ್ ಆಗಿತ್ತು. ಈಗ ಮತ್ತೆ ಟ್ವಿಟರ್ನಲ್ಲಿ ಪೋಸ್ಟ್ ಆಗಿದೆ. ಈ ಪೋಸ್ಟ್ ನೋಡಿದವರು ಹಲವರು ಬೆಕ್ಕಿನ ಸ್ಥಿತಿ ನೋಡಿ ಮರುಗಿದ್ದರೆ, ಮತ್ತೆ ಕೆಲವರು ನಕ್ಕುನಕ್ಕು ಸುಸ್ತಾಯಿತು ಎಂದಿದ್ದಾರೆ.
Comments are closed.