ವಿಜಯವಾಡ: ಪತ್ನಿಯಿಂದ ದೂರವಿದ್ದರೂ ಆಕೆಯ ನಡತೆ ಬಗ್ಗೆ ಶಂಕಿತನಾಗಿದ್ದ ಪತಿಯೊರ್ವ ಆಕೆಯ ತಲೆಯನ್ನು ಕಡಿದು ಅದನ್ನು ಕೈಯಲ್ಲಿ ಹಿಡಿದು ಬೀದಿ ಬೀದಿಯಲ್ಲಿ ರಾಜಾರೋಷವಾಗಿ ಸುತ್ತಾಡಿರುವ ಘಟನೆ ನಡೆದಿದೆ.
ವಿಜಯವಾಡ ಜಿಲ್ಲೆಯ ಸತ್ಯ ನಾರಾಯಣಪುರ ನಿವಾಸಿ 25 ವರ್ಷದ ಮಣಿ ಶಾಂತಿ ಎಂಬುರನ್ನು ಐದು ವರ್ಷಗಳ ಹಿಂದೆ ಪ್ರದೀಪ್ ಎಂಬಾತ ಮದುವೆಯಾಗಿದ್ದ. ಮದುವೆ ನಂತರ ಇಬ್ಬರ ನಡುವೆ ವೈಮನಸ್ಯ ಉಂಟಾಗಿ ಬೇರೇ ಬೇರೆಯಾಗಿ ವಾಸಿಸುತ್ತಿದ್ದರು.
ಪತ್ನಿಯಿಂದ ದೂರವಿದ್ದರು ಪ್ರದೀಪ್ ಆಕೆಯ ನಡತೆ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದ. ಇನ್ನು ವಿಚ್ಛೇದನಕ್ಕಾಗಿ ಪ್ರದೀಪ್ ಕೋರ್ಟ್ ಮೆಟ್ಟಿಲೇರಿದ್ದ. ಈ ಬಗ್ಗೆ ಇಬ್ಬರ ನಡುವೆ ಜಗಳವಾಗುತ್ತಿತ್ತು. ಸೋಮವಾರ ಮಣಿ ಕೆಲಸ ಮುಗಿಸಿಕೊಂಡು ಮನೆಗೆ ಹಿಂದಿರುಗುವಾಗ ಹಿಂಬಾಲಿಸಿಕೊಂಡು ಬಂದ ಪ್ರದೀಪ್ ನಿನ್ನ ಜೊತೆ ಮಾತನಾಡಬೇಕು ಎಂದು ಕೇಳಿದ್ದಾನೆ.
ಈ ವೇಳೆ ಮಣಿ ಮನೆಯೊಳಗೆ ಪ್ರದೀಪ್ ನನ್ನು ಬಿಡಲಿಲ್ಲ. ಆಚೆಯೇ ನಿಲ್ಲಿಸಿ ಮಾತನಾಡುತ್ತಿದ್ದಾಗ ತಾನು ತಂದಿದ್ದ ಮಚ್ಚಿನಿಂದ ಆಕೆ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾನೆ. ತೀವ್ರ ರಕ್ತಸ್ರಾವದಿಂದ ಮಣಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಆ ನಂತರ ಪ್ರದೀಪ್ ಆಕೆಯ ತಲೆಯನ್ನು ಕತ್ತರಿಸಿ ಬೀದಿಯಲ್ಲಿ ತಿರುಗಾಡಿದ್ದು ಇದನ್ನು ಕಂಡ ಜನರು ದಿಕ್ಕಾಪಾಲಾಗಿ ಓಡಿದ್ದಾರೆ. ಪತ್ನಿಯನ್ನು ತಲೆಯನ್ನು ಹಿಡಿದು ಪ್ರದೀಪ್ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.
Comments are closed.