ರಾಷ್ಟ್ರೀಯ

ಉತ್ತರ ಪ್ರದೇಶದ ಬದೌನ್‌ನಲ್ಲಿ ಚಲಿಸುತ್ತಿದ್ದ ಟ್ರಕ್‌ ಪಲ್ಟಿ; 7 ಮಂದಿ ಸಾವು-ಐವರಿಗೆ ಗಾಯ

Pinterest LinkedIn Tumblr

ನವದೆಹಲಿ: ವೇಗವಾಗಿ ಚಲಿಸುತ್ತಿದ್ದ ಟ್ರಕ್‌ ಪಲ್ಟಿಯಾಗಿ ಕನಿಷ್ಠ ಏಳು ಜನರು ಮೃತಪಟ್ಟು, ಐವರು ಗಾಯಗೊಂಡಿರುವ ಘಟನೆ ಇಂದು ಮುಂಜಾನೆ ಉತ್ತರ ಪ್ರದೇಶದ ಬದೌನ್‌ನಲ್ಲಿ ನಡೆದಿದೆ. ಘಟನೆಯಲ್ಲಿ ಟ್ರಕ್‌ ಅಡಿಯಲ್ಲಿ ಮತ್ತಷ್ಟು ಜನರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಗೋಧಿ ಚೀಲಗಳನ್ನು ತುಂಬಿಕೊಂಡು ಬದೌನ್‌ನಿಂದ ವೇಗವಾಗಿ ಬರುತ್ತಿದ್ದ ಟ್ರಕ್‌ ತಿರುವಿನಲ್ಲಿ ತಿರುವು ಮಾಡುವ ವೇಳೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಸಣ್ಣ ಚಹಾ ಅಂಗಡಿಯೊಂದರ ಮೇಲೆ ಬಿದ್ದಿದೆ. ಈ ವೇಳೆ ಚಹಾದಂಗಡಿಯ ಬಳಿಯಲ್ಲಿ ನಿಂತಿದ್ದ ಕನ್ವರಿಯಾಸ್ ಸೇರಿದಂತೆ ಕೆಲವು ಜನರು ಕೂಡ ಸಿಲುಕಿದ್ದಾರೆ ಎನ್ನಲಾಗಿದೆ.

ಪ್ರತ್ಯಕ್ಷ ದರ್ಶಿಗಳು ಹೇಳುವಂತೆ, ಟ್ರಕ್‌ ಚಾಲಕನ ಅಜಾಗರೂಕತೆಯೇ ಘಟನೆಗೆ ಕಾರಣ ಎನ್ನಲಾಗಿದೆ. ಅತಿ ವೇಗದಿಂದ ವಾಹನ ಚಲಾಯಿಸಿದ್ದಕ್ಕೆ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎಂದು ತಿಳಿಸಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಜಿಲ್ಲಾಡಳಿತದ ಅಧಿಕಾರಿಗಳು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.

ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್‌ ಪರವಾಗಿ ಆಸ್ಪತ್ರೆಗೆ ಆಗಮಿಸಿದ್ದ ಸ್ಥಳಿಯ ಶಾಸಕ ರಾಜೀವ್‌ ಕುಮಾರ್‌ ಸಿಂಗ್‌, ಗಾಯಾಳುಗಳಿಗೆ ಉಚಿತ ಚಿಕಿತ್ಸೆ, ಮೃತಪಟ್ಟವರ ಕುಟುಂಬಗಳಿಗೆ ತಲಾ 2 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.

Comments are closed.