ರಾಷ್ಟ್ರೀಯ

ಮತ್ತೆ ವರುಣನ ಅಬ್ಬರದ ಭೀತಿ; ಸಂತ್ರಸ್ತರಿಗೆ ನಡುಕ

Pinterest LinkedIn Tumblr


ನವದೆಹಲಿ: ಸತತ ಮಳೆ, ಪ್ರವಾಹ, ಭೂಕುಸಿತದ ಆಘಾತದಿಂದ ನಲುಗಿ ಹೋಗಿ ರುವ ಕೇರಳದ ಜನತೆಗೆ ಮತ್ತೂಮ್ಮೆ ಆಘಾತದ ಮುನ್ಸೂಚನೆ ಸಿಕ್ಕಿದೆ. ಸೋಮ ವಾರವಷ್ಟೇ ಕೇರಳದ ಎಲ್ಲ ಜಿಲ್ಲೆಗಳಿಂದಲೂ ರೆಡ್‌ ಅಲರ್ಟ್‌ ವಾಪಸ್‌ ಪಡೆಯಲಾಗಿತ್ತಾದರೂ, ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಕಾರಣ, ಮಂಗಳವಾರ ಮತ್ತೆ 3 ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಹೀಗಾಗಿ, ಪ್ರವಾಹ ತಗ್ಗಿದ್ದರಿಂದ ಕೊಂಚ ನಿರಾಳರಾಗಿದ್ದ ಜನತೆಗೆ ಮತ್ತೆ ವರುಣನ ಅಬ್ಬರದ ಭೀತಿ ಶುರುವಾಗಿದ್ದು, ಪ್ರವಾಹ ಸಂತ್ರಸ್ತರಿಗೆ ಗಾಯದ ಮೇಲೆ ಉಪ್ಪು ಸವರಿದಂತಾಗಿದೆ.

ಎರ್ನಾಕುಳಂ, ಇಡುಕ್ಕಿ ಮತ್ತು ಅಳಪ್ಪುಳ ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಹಾಗೂ ಕೊಲ್ಲಂ, ಪಟ್ಟಣಂತಿಟ್ಟ, ಕೊಟ್ಟಾಯಂ, ಪಾಲಕ್ಕಾಡ್‌, ತ್ರಿಶೂರ್‌ ಮತ್ತು ಮಲಪ್ಪುರಂ ಜಿಲ್ಲೆಗಳಿಗೆ ಆರೆಂಟ್ ಅಲರ್ಟ್‌ ಘೋಷಿಸಲಾಗಿದೆ. ಇಲ್ಲಿ ಧಾರಾಕಾರ ಮಳೆ ಯಾಗುವ ಮುನ್ಸೂಚನೆಯಿದ್ದು, ಎಲ್ಲರೂ ಎಚ್ಚರಿಕೆಯಿಂದಿರುವಂತೆ ಹವಾಮಾನ ಇಲಾಖೆ ಸೂಚಿಸಿದೆ.

ಮೃತರ ಸಂಖ್ಯೆ 88: ದೇವರ ನಾಡಲ್ಲಿ ಮಳೆ, ಪ್ರವಾಹ ಹಾಗೂ ಭೂಕುಸಿತದಿಂದ ಸಾವಿಗೀಡಾದವರ ಸಂಖ್ಯೆ ಮಂಗಳವಾರ 88ಕ್ಕೇರಿಕೆಯಾಗಿದೆ. ಇನ್ನೂ 40 ಮಂದಿ ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು 2.52 ಲಕ್ಷ ಮಂದಿ ಇನ್ನೂ ಪರಿಹಾರ ಶಿಬಿರಗಳಲ್ಲೇ ದಿನದೂಡುತ್ತಿದ್ದು, ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ.

ಮಂಗಳವಾರ ವಯನಾಡ್‌ನ‌ ಪರಿಹಾರ ಶಿಬಿರಕ್ಕೆ ಭೇಟಿ ನೀಡಿದ ಸಿಎಂ ಪಿಣರಾಯಿ ವಿಜಯನ್‌, ಸರ್ಕಾರವು ನಿಮ್ಮೊಂದಿಗಿದೆ. ನಾವೆಲ್ಲರೂ ಒಗ್ಗಟ್ಟಾಗಿ ಎಲ್ಲ ರೀತಿಯ ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ. ಸದ್ಯ ಸರ್ಕಾರವು ರಕ್ಷಣಾ ಕಾರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಿದೆ ಎಂದಿದ್ದಾರೆ.

ಭಾರತೀಯರಿಂದ ನೆರವು: ಕೇರಳದ ಪ್ರವಾಹ ಸಂತ್ರಸ್ತರಿಗೆ ನೆರವು ನೀಡುವ ಉದ್ದೇಶದಿಂದ ಯುಎಇಯಲ್ಲಿರುವ ಭಾರತೀಯರು ಹಣ ಸಂಗ್ರಹ ಕಾರ್ಯಕ್ಕೆ ಮುಂದಾಗಿದ್ದಾರೆ. ಕೇರಳದ 50 ಕಲಾವಿದರ ತಂಡವಾದ ವಾಯ್ಸ ಆಫ್ ಹ್ಯುಮಾನಿಟಿ ಎಂಬ ಸಂಸ್ಥೆಯು ಹಲವು ಪ್ರದೇಶಗಳಲ್ಲಿ ಹಣ ಸಂಗ್ರಹಿಸುವ ಕೇಂದ್ರ ಗಳನ್ನು ಸ್ಥಾಪಿಸಲಾಗಿದೆ ಎಂದು ಖಲೀಜ್‌ ಟೈಮ್ಸ್‌ ವರದಿ ಮಾಡಿದೆ.

ಶೇ.8 ಹೆಚ್ಚುವರಿ ಮಳೆ: ಪ್ರಸಕ್ತ ಮುಂಗಾರಿನಲ್ಲಿ ಮಧ್ಯಪ್ರದೇಶವು ವಾಡಿಕೆಗಿಂತ ಶೇ.8ರಷ್ಟು ಹೆಚ್ಚುವರಿ ಮಳೆಯನ್ನು ಪಡೆದಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಜೂ.1ರಿಂದ ಆಗಸ್ಟ್‌ 13ರವರೆಗೆ ರಾಜ್ಯದಲ್ಲಿ ಸುಮಾರು 623 ಮಿ.ಮೀ. ಮಳೆಯಾಗಿದೆ ಎಂದೂ ತಿಳಿಸಿದೆ. ಸಾಮಾನ್ಯವಾಗಿ ಈ ಅವಧಿಯಲ್ಲಿ 577 ಮಿ.ಮೀ. ಮಳೆಯಾಗುತ್ತದೆ.

ನೌಕಾಪಡೆಯಿಂದ 14,000 ಮಂದಿಯ ರಕ್ಷಣೆ
ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿರುವ ನೌಕಾಪಡೆಯು ಈವರೆಗೆ 14 ಸಾವಿರ ಮಂದಿಯನ್ನು ರಕ್ಷಿಸಿರುವುದಾಗಿ ಹೇಳಿಕೊಂಡಿದೆ. ‘ವರ್ಷ ಭಾರತ್‌’ ಎಂಬ ಹೆಸರಿನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಒಟ್ಟು 41 ನೌಕಾ ತಂಡಗಳು ಭಾಗಿಯಾಗಿದ್ದವು. ಈ ಮೂರೂ ರಾಜ್ಯಗಳ ಪ್ರವಾಹಪೀಡಿತ ಪ್ರದೇಶಗಳಲ್ಲಿ ಲಘು ಹೆಲಿಕಾಪ್ಟರ್‌ಗಳು ಹಾಗೂ ಬೋಟ್‌ಗಳನ್ನು ಬಳಸಿಕೊಂಡು ಸಂಕಷ್ಟದಲ್ಲಿದ್ದ ಜನರನ್ನು ರಕ್ಷಿಸಲಾಗಿದೆ ಎಂದು ಪಣಜಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ನೌಕಾಪಡೆ ಹಿರಿಯ ಅಧಿಕಾರಿ ರೇರ್‌ ಅಡ್ಮಿರಲ್ ಫಿಲಿಪೋಸ್‌ ಪೈನುಮೂತಿಲ್ ತಿಳಿಸಿದ್ದಾರೆ. ನೌಕಾಪಡೆಯ ವಿಮಾನವು ಕರ್ನಾಟಕದಲ್ಲಿ 1,305 ಕೆಜಿ ಪರಿಹಾರ ಸಾಮಗ್ರಿಗಳನ್ನು ಒದಗಿಸಿದ್ದು, ಮಹಾರಾಷ್ಟ್ರದಲ್ಲಿ 1,890 ಕೆಜಿ ಸಾಮಗ್ರಿಗಳನ್ನು ನೀಡಿದೆ ಎಂದೂ ಅವರು ಹೇಳಿದ್ದಾರೆ.
6,813 ಕೋಟಿ ರೂ. ಪರಿಹಾರ ಕೋರಿಕೆ

ಮಹಾರಾಷ್ಟ್ರದ ಸಾಂಗ್ಲಿ ಹಾಗೂ ಕೊಲಾಪುರದಲ್ಲಿ ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆ ಚುರುಕಾಗಿದೆ. ಕೇಂದ್ರ ಸರ್ಕಾರದಿಂದ 6,813 ಕೋಟಿ ರೂ. ಪರಿಹಾರ ಪ್ಯಾಕೇಜ್‌ಗೆ ಮನವಿ ಸಲ್ಲಿಸುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಮಂಗಳವಾರ ತಿಳಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆಯೇ, ಮಹಾರಾಷ್ಟ್ರದ ಪಾಲ್ಗಾರ್‌ನಲ್ಲಿ ಮಂಗಳವಾರ 3.2 ತೀವ್ರತೆಯ ಲಘು ಭೂಕಂಪ ಸಂಭವಿಸಿ, ಜನರನ್ನು ಆತಂಕಕ್ಕೀಡು ಮಾಡಿದೆ. ಆದರೆ, ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ಹಾನಿಯಾಗಿಲ್ಲ.

ಇಂದು ಧಾರಾಕಾರ ಮಳೆ: ಮಹಾರಾಷ್ಟ್ರದ ಪುಣೆ, ಕೊಲಾಪುರ ಮತ್ತು ಸತಾರಾ ಜಿಲ್ಲೆಗಳಲ್ಲಿ ಬುಧವಾರ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಪ್ರವಾಹದ ಹೊಡೆತದಿಂದ ಚೇತರಿಸಿಕೊಳ್ಳುತ್ತಿರುವ ಜನರಿಗೆ ಈ ವರದಿಯು ಆತಂಕ ಮೂಡಿಸಿದೆ. ಈಗಾಗಲೇ ಪ್ರವಾಹ ದಿಂದಾಗಿ ಸುಮಾರು 4 ಲಕ್ಷ ಮಂದಿ ನಿರ್ವಸಿತರಾಗಿದ್ದು, ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ.

Comments are closed.