ನವದೆಹಲಿ: ಕಳೆದ 20 ದಿನಗಳಿಂದ ಜಮ್ಮು ಕಾಶ್ಮೀರದ ನಾಗರಿಕರಿಗೆ ಕ್ರೂರ ಕಾನೂನು ಮತ್ತು ಅಮಾನವೀಯ ಬಲ ಪ್ರದರ್ಶನದ ನರಕ ದರ್ಶನವಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬಲವಾದ ಆರೋಪ ಮಾಡಿದ್ದಾರೆ.
ನಿನ್ನೆಯಷ್ಟೇ ವಿಪಕ್ಷ ನಾಯಕರೊಂದಿಗೆ ಜಮ್ಮು ಕಾಶ್ಮೀರದ ಪರಿಸ್ಥಿತಿ ಅವಲೋಕನಕ್ಕಾಗಿ ಭೇಟಿ ನೀಡುವ ಉದ್ದೇಶದಿಂದ ಜಮ್ಮುವಿಗೆ ತೆರಳಿ ಬಳಿಕ ಶ್ರೀನಗರ ವಿಮಾನ ನಿಲ್ದಾಣದಿಂದಲೇ ವಾಪಾಸಾಗಿದ್ದ ರಾಹುಲ್ ಗಾಂಧಿ ಅವರು ಕಾಶ್ಮೀರ ಪರಿಸ್ಥಿತಿಯ ಕುರಿತಾಗಿ ತಮ್ಮ ವ್ಯಾಖ್ಯಾನವನ್ನು ನೀಡಿದ್ದಾರೆ.
‘ನಿನ್ನೆ ಶ್ರೀನಗರಕ್ಕೆ ಬಂದಿಳಿದ ಸಂದರ್ಭದಲ್ಲಿ ವಿಪಕ್ಷಗಳ ನಾಯಕರಿಗೆ ಮತ್ತು ಪತ್ರರ್ತರಿಗೆ ಕಠಿಣ ಕಾನೂನು ಹೇರಿಕೆಯ ಮತ್ತು ಬಲಪ್ರದರ್ಶನದ ಮೂಲಕ ಎಲ್ಲರ ಹಕ್ಕುಗಳನ್ನು ದಮನಿಸಿರುವ ಸ್ಥಿತಿಯ ನೈಜ ದರ್ಶನವಾಯ್ತು’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.
ಭಾರತ ಪಾಕಿಸ್ಥಾನ ಗಡಿ ಭಾಗದ ಮೂಲಕ ಭಯೋತ್ಪಾದಕರು ಕಣಿವೆ ಭಾಗದ ಶಾಂತಿ ಕದಡುವ ಅಪಾಯವಿರುವಂತಹ ಈ ಸಂದರ್ಭದಲ್ಲಿ ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದೇ ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಹೇಳುವ ಮೂಲಕ ಜಮ್ಮು ಮತ್ತು ಕಾಶ್ಮೀರದ ಪ್ರಧಾನ ಕಾರ್ಯದರ್ಶಿ ರೋಹಿತ್ ಕನ್ಸಾಲ್ ಅವರು ವಿಪಕ್ಷ ನಾಯಕರಿಗೆ ನೂತನ ಕೇಂದ್ರಾಡಳಿತ ಪ್ರದೇಶದ ವಾಸ್ತವ ಸ್ಥಿತಿ ಅವಲೋಕನಕ್ಕೆ ಅವಕಾಶ ಮಾಡಿಕೊಡದಿರುವ ಸ್ಥಳೀಯಾಡಳಿತದ ಕ್ರಮವನ್ನು ಸಮರ್ಥಿಸಿಕೊಂಡರು.
ಆಗಸ್ಟ್ 14ರಂದು ಕಾಶ್ಮೀರದ ನಾಯಕ ಶಾ ಫೈಸಲ್ ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದುಕೊಂಡು ಶ್ರೀನಗರಕ್ಕೆ ಕಳುಹಿಸಿಕೊಡಲಾಗಿತ್ತು. ಫೈಸಲ್ ಅವರು ಅಮೆರಿಕಾದ ವಿಶ್ವವಿದ್ಯಾನಿಲಯ ಒಂದರಲ್ಲಿ ತನ್ನ ಅಧ್ಯಯನವನ್ನು ಪೂರ್ತಿಗೊಳಿಸಲು ತೆರಳುತ್ತಿದ್ದರು ಎಂದು ಹೇಳಲಾಗುತ್ತಿದೆ. ಇನ್ನು ರಾಜ್ಯಸಭೆಯಲ್ಲಿ ವಿಪಕ್ಷ ನಾಯಕರಾಗಿರುವ ಗುಲಾಂ ನಬಿ ಆಝಾದ್ ಅವರನ್ನು ಆಗಸ್ಟ್ 20ರಂದು ದೆಹಲಿಗೆ ಮರಳಿ ಕಳುಹಿಸುವ ಮುನ್ನ ಜಮ್ಮು ವಿಮಾನ ನಿಲ್ದಾಣದಲ್ಲಿ ಸುಮಾರು ಎರಡು ಗಂಟೆಗಳವರೆಗೆ ವಶಕ್ಕೆ ಪಡೆದುಕೊಳ್ಳಲಾಗಿತ್ತು.
ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರಕಾರ ರದ್ದುಗೊಳಿಸಿದ ಬಳಿಕ ಆ ರಾಜ್ಯದಲ್ಲಿ ಹೇರಳ ಸೇನಾ ಪಡೆಯನ್ನು ನಿಯೋಜಿಸಲಾಗಿದೆ. ಅಂತರ್ಜಾಲ ಸೇರಿದಂತೆ ಸಂವಹನ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಮತ್ತು ಕೆಲ ದಿನಗಳ ಹಿಂದೆಯಷ್ಟೇ ಶಾಲೆಗಳು ಪುನರಾರಂಭಗೊಂಡಿದ್ದರೂ ತರಗತಿಗಳಲ್ಲಿ ಮಕ್ಕಳ ಹಾಜರಾತಿ ಕಡಿಮೆ ಇತ್ತು.
ಜಮ್ಮು ಕಾಶ್ಮೀರದಲ್ಲಿ ನಿಧಾನವಾಗಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿರುವುದರಿಂದ ಯಾವುದೇ ರಾಜಕೀಯ ಪಕ್ಷದ ನಾಯಕರು ಸದ್ಯಕ್ಕೆ ಇಲ್ಲಿಗೆ ಭೇಟಿ ನೀಡದಂತೆ ಇಲ್ಲಿನ ಆಡಳಿತವು ಇತ್ತೀಚೆಗಷ್ಟೇ ಎಲ್ಲಾ ರಾಜಕೀಯ ಪಕ್ಷಗಳಿಗೆ ಮನವಿ ಮಾಡಿಕೊಂಡಿತ್ತು.
Comments are closed.