ರಾಷ್ಟ್ರೀಯ

ಪ.ಬಂಗಾಳ ವಿಧಾನಸಭೆ ಚುನಾವಣೆ: ಬಿಜೆಪಿ ವಿರುದ್ಧ ಕಾಂಗ್ರೆಸ್​-ಟಿಎಂಸಿ ಮೈತ್ರಿ

Pinterest LinkedIn Tumblr


ಕೋಲ್ಕತ್ತಾ (ಆ.25): ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಿಧಾನವಾಗಿ ಮೇಲುಗೈ ಸಾಧಿಸುತ್ತಿದ್ದು, ಇದರಿಂದ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷಕ್ಕೆ ಅಸ್ತಿತ್ವ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಹೀಗಾಗಿ, 2021ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಜೊತೆ ಕೈ ಜೋಡಿಸಲು ಮಮತಾ ಮುಂದಾಗಿದ್ದಾರೆ. ಟಿಎಂಸಿ ಮನವಿಗೆ ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿ ಗ್ರೀನ್​ ಸಿಗ್ನಲ್​ ನೀಡಿದ್ದು, ಈ ಬೆಳವಣಿಗೆ ಭಾರೀ ಅಚ್ಚರಿ ಮೂಡಿಸಿದೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಉತ್ತಮ ಪ್ರದರ್ಶನ ನೀಡಿತ್ತು. ಈ ವಿಚಾರ ಟಿಎಂಸಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅಲ್ಲದೆ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಹೀಗಾಗಿ ಒಗ್ಗಟ್ಟಿನಿಂದ ಬಿಜೆಪಿ ವಿರುದ್ಧ ಸೆಣೆಸಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕರೆ ನೀಡಿದ್ದರು. ಈ ಕೋರಿಕೆಯನ್ನು ಸೋನಿಯಾ ಗಾಂಧಿ ಸ್ವೀಕರಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಪಶ್ಚಿಮ ಬಂಗಾಳ ಟಿಎಂಸಿ ಅಧ್ಯಕ್ಷ ಸೋಮೇಂದ್ರ ನಾಥ್​ ಮಿತ್ರಾ, “ಮೈತ್ರಿ ವಿಚಾರವಾಗಿ ಭಾನುವಾರ ಸಂಜೆ ಸಭೆ ನಡೆದಿತ್ತು. ಈ ವೇಳೆ ಸೋನಿಯಾ ಗಾಂಧಿ ಮೈತ್ರಿ ಮಾಡಿಕೊಳ್ಳಲು ಒಪ್ಪಿಗೆ ಸೂಚಿಸಿದ್ದಾರೆ. ಬಿಜೆಪಿಯನ್ನು ಮಟ್ಟಹಾಕಲು ಇದು ಅವಶ್ಯಕವಾಗಿತ್ತು,” ಎಂದಿದ್ದಾರೆ.

ಈ ವಿಚಾರವನ್ನು ಬಿಜೆಪಿ ನಾಯಕರು ಟೀಕೆ ಮಾಡಿದ್ದಾರೆ. ಈಗಾಗಲೇ ಕಾಂಗ್ರೆಸ್​ ಹಾಗೂ ಟಿಎಂಸಿಗೆ ವಿಧಾನಸಭೆ ಚುನಾವಣೆಯಲ್ಲಿ ಸೋಲುವ ಭಯ ಕಾಡುತ್ತಿದೆ. ಹಾಗಾಗಿ, ಮೈತ್ರಿಯ ಮೊರೆ ಹೋಗಿದ್ದಾರೆ ಎಂದು ವ್ಯಂಗ್ಯವಾಡಿದೆ.

ಪಶ್ಚಿಮ ಬಂಗಾಳ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 18 ಸ್ಥಾನ ಗಳಿಸುವ ಮೂಲಕ ಇತಿಹಾಸ ನಿರ್ಮಿಸಿತ್ತು. ಇದು ಟಿಎಂಸಿ ಅಸಮಾಧಾನಕ್ಕೆ ಕಾರಣವಾಗಿತ್ತು. ಹಾಗಾಗಿ ಚುನಾವಣಾ ಫಲಿತಾಂಶದ ನಂತರ ನಿರಂತವಾಗಿ ಘರ್ಷಣೆಗಳು ನಡೆಯುತ್ತಲೇ ಇವೆ.

Comments are closed.