ರಾಷ್ಟ್ರೀಯ

ಗೃಹ ಸಚಿವ ಅಮಿತ್ ಶಾರಿಂದ ನಕ್ಸಲ್ ಪೀಡಿತ ಪ್ರದೇಶಗಳ ಪರಿಸ್ಥಿತಿ ಅವಲೋಕನ

Pinterest LinkedIn Tumblr


ನವದೆಹಲಿ(ಆ. 26): ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಕ್ಸಲ್​ಪೀಡಿತ ಪ್ರದೇಶಗಳಲ್ಲಿನ ವಾಸ್ತವ ಪರಿಸ್ಥಿತಿಯನ್ನು ಅವಲೋಕಿಸಲು ಇಂದು ಸಭೆ ನಡೆಸಿದರು. ಈ ಸಭೆಯಲ್ಲಿ ಕೆಲ ರಾಜ್ಯಗಳ ಮುಖ್ಯಮಂತ್ರಿಗಳು, ಪೊಲೀಸ್ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು ಪಾಲ್ಗೊಂಡಿದ್ದರು. ನಕ್ಸಲ್​ಪೀಡಿತ ಪ್ರದೇಶಗಳಲ್ಲಿ ನಡೆಯುತ್ತಿರುವ ನಕ್ಸಲ್ ನಿಗ್ರಹ ಕಾರ್ಯಾಚರಣೆ ಹಾಗೂ ಅಭಿವೃದ್ಧಿ ಕೆಲಸಗಳನ್ನು ಅಮಿತ್ ಶಾ ಪರಿಶೀಲಿಸಿದರು.

ಬಿಹಾರ, ಒಡಿಶಾ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಜಾರ್ಖಂಡ್ ಮತ್ತು ಛತ್ತೀಗಡ ರಾಜ್ಯಗಳ ಮುಖ್ಯಮಂತ್ರಿಗಳಾದ ನಿತೀಶ್ ಕುಮಾರ್, ನವೀನ್ ಪಾಟ್ನಾಯಕ್, ಯೋಗಿ ಆದಿತ್ಯನಾಥ್, ಕಮಲನಾಥ್, ರಘುಬರ್ ದಾಸ್ ಮತ್ತು ಭೂಪೇಶ್ ಬಾಘೆಲ್ ಜೊತೆಗೆ 10 ರಾಜ್ಯಗಳ ಉನ್ನತ ಅಧಿಕಾರಿಗಳು ಮತ್ತು ಹಿರಿಯ ಪೊಲೀಸರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಗೃಹ ಇಲಾಖೆ ಮತ್ತು ಅರೆಸೇನಾ ಪಡೆಗಳ ಉನ್ನತ ಮಟ್ಟದ ಅಧಿಕಾರಿಗಳೂ ಇದರಲ್ಲಿ ಭಾಗವಹಿಸಿದ್ದರು. ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರಪ್ರದೇಶಗಳ ಮುಖ್ಯಮಂತ್ರಿಗಳು ಪಾಲ್ಗೊಳ್ಳದಿದ್ದರೂ ಆ ರಾಜ್ಯದ ಪೊಲೀಸರು ಸಭೆಗೆ ಆಗಮಿಸಿದ್ದರು.

ಗೃಹ ಸಚಿವ ಅಮಿತ್ ಶಾ ಅವರು ಎಲ್ಲಾ 10 ನಕ್ಸಲ್ ಪೀಡಿತ ರಾಜ್ಯಗಳಲ್ಲಿನ ಸದ್ಯದ ಪರಿಸ್ಥಿತಿ ಬಗ್ಗೆ ಮಾಹಿತಿ ಕಲೆಹಾಕಿದರು. ಗೃಹ ಸಚಿವರಾದ ಬಳಿಕ ಅಮಿತ್ ಶಾ ಅವರು ಈ ಸಭೆ ನಡೆಸಿದ್ದು ಇದೇ ಮೊದಲು.

ಗೃಹ ಸಚಿವಾಲಯದ ಮಾಹಿತಿ ಪ್ರಕಾರ ಮೋದಿ ಸರ್ಕಾರದ ಅವಧಿಯಲ್ಲಿ ನಕ್ಸಲ್ ಸಂಬಂಧಿತ ಹಿಂಸಾಚಾರ ಘಟನಗಳ ಪ್ರಮಾಣ ಸಾಕಷ್ಟು ಕಡಿಮೆಯಾಗಿದೆ. 2009-13ರಲ್ಲಿ 8,782 ಪ್ರಕರಣಗಳು ದಾಖಲಾಗಿವೆ. 2014-18ರ ಅವಧಿಯಲ್ಲಿ ಇದು 4,969ಕ್ಕೆ ಇಳಿದಿದೆ ಎಂದು ಸಚಿವಾಲಯ ಪ್ರಕಟಿಸಿದ ಅಂಕಿ ಅಂಶದಲ್ಲಿದೆ.

ನಕ್ಸಲ್ ಹಿಂಸಾಚಾರದಿಂದ ಪ್ರಾಣ ಹಾನಿಯಾದ ಸಂಖ್ಯೆಯೂ ಕಡಿಮೆಯಾಗಿದೆಯಂತೆ. 2009-13ರ ಅವಧಿಯಲ್ಲಿ ನಕ್ಸಲ್ ಹಿಂಸಾಚಾರಕ್ಕೆ 3,326 ಮಂದಿ ಬಲಿಯಾಗಿದ್ದಾರೆ. ಇದಕ್ಕೆ ಹೋಲಿಸಿದರೆ 2014-18ರಲ್ಲಿ ಸಾವಿನ ಸಂಖ್ಯೆ ಶೇ. 60ರಷ್ಟು ಕಡಿಮೆಯಾಗಿದೆ ಎಂದು ಈ ಅಂಕಿ ಅಂಶ ತಿಳಿಸುತ್ತದೆ.

2015ರಲ್ಲಿ ನಕ್ಸಲ್ ಸಮಸ್ಯೆ ನಿಗ್ರಹಿಸಲು ಮತ್ತು ನಕ್ಸಲ್​ಪೀಡಿತ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರವು ರಾಷ್ಟ್ರೀಯ ನೀತಿ ಮತ್ತು ಕ್ರಿಯಾ ಯೋಜನೆಯನ್ನು ಜಾರಿಗೆ ತಂದಿದೆ. ಹಾಗೆಯೇ ತೀವ್ರ ನಕ್ಸಲ್ ಸಮಸ್ಯೆ ಇರುವ ಜಿಲ್ಲೆಗಳಿಗೆ ಕೇಂದ್ರದಿಂದ ವಿಶೇಷ ಪ್ಯಾಕೇಜ್ ಕೂಡ ಸಿದ್ಧವಾಗಿದೆ.

Comments are closed.