ಚೆನ್ನೈ: ಚಂದ್ರಯಾನ 2 ರ ಮಹತ್ವದ ಕ್ಷಣದಲ್ಲಿ ಸಂಪರ್ಕ ಕಡಿತವಾದ್ದರಿಂದ ಇಡೀ ದೇಶಕ್ಕೆ ನಿರಾಶೆ ಕವಿದಿದೆ. ಆದರೆ ಚಂದ್ರನ ಕಕ್ಷೆಯಿಂದ ನೆಲದ ಮೇಲೆ ಇಳಿಯಬೇಕಾದರೆ, ವಿಕ್ರಂ ಲ್ಯಾಂಡರ್‌ಗೆ ಏನಾಯಿತು? ಕಕ್ಷೆಯಿಂದ ವೇಗ ತಗ್ಗಿಸಿಕೊಂಡು, ಇನ್ನೇನು ನೆಲದಲ್ಲಿ ಇಳಿದೇ ಬಿಟ್ಟಿತು ಎನ್ನುವಾಗ ಆದದ್ದೇನು ಎಂಬುದು ಸದ್ಯ ಮಿಲಿಯನ್ ಡಾಲರ್ ಮೌಲ್ಯದ ಪ್ರಶ್ನೆಯಾಗಿದೆ.
ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವಾಗ ಅದು ಡೋಲಾಯಮಾನ ಸ್ಥಿತಿಗೆ ಬಂದು ಸಂಪರ್ಕ ಕಡಿದಿರಬಹುದು ಎಂಬ ವಾದವನ್ನು ಇಸ್ರೋ ವಿಜ್ಞಾನಿಗಳೂ ಒಪ್ಪಿಕೊಳ್ಳುತ್ತಾರೆ. ವಿಕ್ರಂ ಲ್ಯಾಂಡರ್ 1471 ಕೆ.ಜಿ. ಭಾರವಿದ್ದು 30 ಕಿ.ಮೀ. ಎತ್ತದಿಂದ ಪ್ರತಿ ಸೆಕೆಂಡ್‌ಗೆ 1, 680 ಮೀ. ವೇಗದಲ್ಲಿ ಅದು ಇಳಿಯುತ್ತಿತ್ತು. ಹೆಚ್ಚಾ ಕಡಿಮೆ ಕೊನೆಯ ಕ್ಷಣದವರೆಗೆ ಅದು ಅತಿ ಮೆಲ್ಲನೆ ಇಳಿಯತೊಡಗಿದ್ದು, ವಿಜ್ಞಾನಿಗಳು ಸಹಿತ ಎಲ್ಲರಿಗೆ ಖುಷಿ ತಂದಿತ್ತು. ಇದಕ್ಕೆ ಪೂರಕವಾಗಿ ಕಕ್ಷೆಯಿಂದ ಜಾರುವ ವೇಳೆ ರಫ್ ಬ್ರೇಕಿಂಗ್ (ಇಳಿಯುವ ಮುನ್ನ ವೇಗ ತಗ್ಗಿಸುವ ಕೆಲಸ) ಯಶಸ್ವಿಯಾಗಿ ಮಾಡಿತ್ತು. ಪಥದಲ್ಲಿ ಅದು ಮುನ್ನುಗ್ಗುತ್ತಿದ್ದರೂ ಕೊನೆ ಕ್ಷಣದಲ್ಲಿ ಪಥದಿಂದ ಜಾರಿತ್ತು. ಇದೇ ಸಂದರ್ಭದಲ್ಲಿ ಅದೇನಾದರೂ ಡೋಲಾಯಮಾನವಾಯಿತೇ ಎಂಬ ಪ್ರಶ್ನೆ ಈಗ ಹುಟ್ಟಿಕೊಂಡಿದೆ.
5 ಕಿ.ಮೀ. ಎತ್ತರದಲ್ಲಿರುವಾಗ ವಿಕ್ರಂ ಲ್ಯಾಂಡರ್ ತುಸು ಪಥ ಬದಲಾಯಿಸಿದ್ದು, ಬಳಿಕ ಕೂಡಲೇ ಸರಿಯಾದ ಪಥಕ್ಕೆ ಬಂದಿತ್ತು. ಆದರೆ ಮತ್ತೆ ಅದು ಪಥ ಬದಲಿಸಿದ್ದು ಸಮಸ್ಯೆಗೆ ಕಾರಣವಾಯಿತು. ಒಂದು ವೇಳೆ ಲ್ಯಾಂಡರ್ ಉಲ್ಟಾ ಆಗಿದ್ದರೆ, ಅದರಲ್ಲಿರುವ ದ್ರವ ಎಂಜಿನ್ ಉರಿಯುತ್ತಿದ್ದುದರಿಂದ ಗ್ರಹಿಸಿದಂತೆ ಇಳಿಯದೆ ಸಮಸ್ಯೆಯಾಗಿರಲೂಬಹುದು ಎನ್ನಲಾಗಿದೆ. ಅಲ್ಲದೇ ಒಂದು ವೇಳೆ ಎಂಜಿನ್ ಚಾಲೂ ಇರುವಾಗ ಅದು ಡೋಲಾಯಮಾನವಾಗಲು ಸಾಧ್ಯವಿದೆಯೇ ಎಂಬುದೂ ಪ್ರಶ್ನೆಯಾಗಿದೆ. ಹೆಸರು ಹೇಳಲಿಚ್ಛಿಸದ ಇಸ್ರೋ ವಿಜ್ಞಾನಿಯೊಬ್ಬರ ಪ್ರಕಾರ, ಲ್ಯಾಂಡರ್‌ನ ನೋದಕಗಳು ಆಫ್ ಆಗಿ, ಅದು ವೇಗ ಪಡೆದು ಅಪ್ಪಳಿಸಿ, ಸಂಪರ್ಕ ಕಡಿತವಾಗಿರಲೂಬಹುದು ಎನ್ನುತ್ತಾರೆ. ನೋದಕಗಳು ಆಫ್ ಆದರೆ ಲ್ಯಾಂಡರ್ ಒಮ್ಮೆಲೆ ಬಿದ್ದು ಸಮಸ್ಯೆ ಸೃಷ್ಟಿಯಾಗಿರಬಹುದು ಎನ್ನಲಾಗಿದೆ.
Comments are closed.