ಅಂತರಾಷ್ಟ್ರೀಯ

ಸ್ವಚ್ಛ ಭಾರತ ಅಭಿಯಾನಕ್ಕಾಗಿ ಪ್ರಧಾನಿ ಮೋದಿ ಮುಡಿಗೆ ‘ಗ್ಲೋಬಲ್ ಗೋಲ್‌ ಕೀಪರ್‌’ ಪ್ರಶಸ್ತಿ ಗರಿ

Pinterest LinkedIn Tumblr

ನ್ಯೂಯಾರ್ಕ್: ಸ್ವಚ್ಛ ಭಾರತ ಅಭಿಯಾನದ ಮೂಲಕ ದೇಶಾದ್ಯಂತ ಸ್ವಚ್ಛತೆಯ ಪಾಠ ಮಾಡಿದ್ದ ಪ್ರಧಾನಿ ಮೋದಿಗೆ ಬಿಲ್ ಗೇಟ್ಸ್ ಫೌಂಡೇಷನ್ ಸಂಸ್ಥೆ ‘ಗ್ಲೋಬಲ್ ಗೋಲ್‌ಕೀಪರ್‌’ ಪ್ರಶಸ್ತಿ ನೀಡಿ ಗೌರವಿಸಿದೆ.

ಸ್ವಚ್ಛ ಭಾರತ ಅಭಿಯಾನಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಲ್‌ ಗೇಟ್ಸ್ ಮತ್ತು ಮೆಲಿಂಡಾ ಗೇಟ್ಸ್‌ ಪ್ರತಿಷ್ಠಾನದಿಂದ ‘ಗ್ಲೋಬಲ್ ಗೋಲ್‌ಕೀಪರ್‌’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ದೇಶಕ್ಕೆ ಸಮರ್ಪಣೆ
ನ್ಯೂಯಾರ್ಕ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರಧಾನಿ ಮೋದಿ, ಪ್ರಶಸ್ತಿಯನ್ನು ದೇಶಕ್ಕೆ ಅರ್ಪಿಸಿದರು. ‘ನಾನು, ಗೇಟ್ಸ್‌ ಪ್ರತಿಷ್ಠಾನ ನೀಡಿರುವ ‘ಜಾಗತಿಕ ಗೋಲ್‌ಕೀಪರ್‌‘ ಪ್ರಶಸ್ತಿಯನ್ನು ಭಾರತದ 130 ಕೋಟಿ ಜನರಿಗೆ ಮತ್ತು ಸ್ಚಚ್ಛತೆಗಾಗಿ ನಡೆದ ರಾಷ್ಟ್ರದ ಸಾಮೂಹಿಕ ಕಾರ್ಯಗಳಿಗೆ ಸಮರ್ಪಿಸುತ್ತೇನೆ ಎಂದು ಹೇಳಿದರು.

‘ಸ್ವಚ್ಛ ಭಾರತದ ಯಶಸ್ಸಿಗೆ ಮಹಿಳೆಯರು ಮತ್ತು ಮಕ್ಕಳು ಹೆಚ್ಚು ಹೆಚ್ಚು ಕೈ ಜೋಡಿಸಿದ್ದಾರೆ. ಇದು ಅವರ ಕೊಡುಗೆ, ಆದ್ದರಿಂದ ಹೆಚ್ಚು ಸಂತೋಷವಾಗಿದೆ. ಅಷ್ಟೇ ಅಲ್ಲ, ಸ್ವಚ್ಛ ಭಾರತ ಅಭಿಯಾನವನ್ನು ‘ಜನರ ಚಳವಳಿ‘ಯಾಗಿ ಪರಿವರ್ತಿಸಿದ ಭಾರತೀಯರು, ನಿತ್ಯದ ಜೀವನದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದರು. ಆದ್ದರಿಂದ, ಈ ಪ್ರಶಸ್ತಿಯನ್ನು ದೇಶದ ಜರಿಗೆ ಸಮರ್ಪಿಸುತ್ತಿದ್ದೇನೆ ಎಂದರು.

ಮಹಾತ್ಮ ಗಾಂಧಿ ಅವರ 150ನೇ ಜನ್ಮದಿನಾಚರಣೆ ವರ್ಷದಲ್ಲಿ ಪ್ರಶಸ್ತಿ ಪಡೆಯುತ್ತಿರುವುದು ನನಗೆ ವೈಯಕ್ತಿಕವಾಗಿ ಮಹತ್ವದ್ದಾಗಿದೆ. 130 ಕೋಟಿ ಭಾರತೀಯರು ಪ್ರತಿಜ್ಞೆ ಮಾಡಿದರೆ ಯಾವುದೇ ಸವಾಲನ್ನು ಜಯಿಸಬಹುದು ಎಂದು ಅವರು ಹೇಳಿದ್ದಾರೆ.

2014ರ ಅಕ್ಟೋಬರ್ 2ರಂದು ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತ ಅಭಿಯಾನವನ್ನು ಆರಂಭಿಸಿದ್ದರು.

Comments are closed.