ರಾಷ್ಟ್ರೀಯ

ಗುಜರಾತಿನಲ್ಲಿ ಬಸ್ ಪಲ್ಟಿಯಿಂದಾಗಿ 21 ಸಾವು

Pinterest LinkedIn Tumblr


ನವದೆಹಲಿ: ಉತ್ತರ ಗುಜರಾತ್‌ನ ಬನಸ್ಕಂತದಲ್ಲಿ ಖಾಸಗಿ ಐಷಾರಾಮಿ ಬಸ್ ಪಲ್ಟಿಯಾಗಿದ್ದರಿಂದಾಗಿ ಇಪ್ಪತ್ತೊಂದು ಜನರು ಸಾವನ್ನಪ್ಪಿದ್ದಾರೆ ಮತ್ತು 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಸುಮಾರು 70 ಪ್ರಯಾಣಿಕರನ್ನು ಹೊತ್ತ ಖಾಸಗಿ ಐಷಾರಾಮಿ ಬಸ್ ತ್ರಿಶೂಲಿಯಾ ಘಾಟ್‌ನಲ್ಲಿ ಪಲ್ಟಿಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಜಿತ್ ರಾಜಿಯನ್ ಹೇಳಿದ್ದಾರೆ.ಭಾರಿ ಮಳೆಯಿಂದಾಗಿ ಗುಡ್ಡಗಾಡು ಪ್ರದೇಶದ ಜಾರು ರಸ್ತೆಯ ಮೇಲೆ ಬಸ್ ಚಾಲಕ ನಿಯಂತ್ರಣ ಕಳೆದುಕೊಂಡಿದ್ದರಿಂದಾಗಿ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಅಹಮದಾಬಾದ್‌ನಿಂದ 160 ಕಿ.ಮೀ ದೂರದಲ್ಲಿರುವ ಅಂಬಾಜಿ-ದಂತಾ ಹೆದ್ದಾರಿಯಲ್ಲಿರುವ ತ್ರಿಶೂಲಿಯಾ ಘಾಟ್‌ ರಸ್ತೆಯಿಂದ ಬಸ್ ನ್ನು ಬುಲ್ಡೋಜರ್‌ಗಳ ಮೂಲಕ ತೆರವುಗೊಳಿಸಲಾಗುತ್ತಿದೆ.

ಈ ಘಟನೆಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ ‘ ಬನಸ್ಕಂತನಿಂದ ವಿನಾಶಕಾರಿ ಸುದ್ದಿ. ಅಪಘಾತದಿಂದಾಗಿ ಪ್ರಾಣ ಕಳೆದುಕೊಂಡಿರುವುದನ್ನು ತಿಳಿದು ನನಗೆ ತುಂಬಾ ದುಃಖವಾಗಿದೆ. ಇದಕ್ಕೆ ನಾನು ಸಂತಾಪ ವ್ಯಕ್ತಪಡಿಸುತ್ತೇನೆ. ಸ್ಥಳೀಯ ಆಡಳಿತವು ಗಾಯಗೊಂಡವರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತಿದೆ. ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ’ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿ ‘ಗುಜರಾತ್‌ನ ಬನಸ್ಕಂತದಲ್ಲಿ ಸಂಭವಿಸಿದ ದುರಂತ ಬಸ್ ಅಪಘಾತ ನನಗೆ ತೀವ್ರ ಆಘಾತ ತರಿಸಿದೆ. ರಾಜ್ಯ ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ, ಅಗತ್ಯವಿರುವ ಜನರಿಗೆ ಸಹಾಯ ಮಾಡಲು ಸಾಧ್ಯವಿರುವ ಪ್ರಯತ್ನವನ್ನು ಮಾಡುತ್ತಿದ್ದಾರೆ’ ಎಂದು ಹೇಳಿದ್ದಾರೆ.

Comments are closed.