ರಾಷ್ಟ್ರೀಯ

ಪಾಕ್ ನ ಕರ್ತಾರ್‌ಪುರ ಕಾರಿಡಾರ್ ಉದ್ಘಾಟನೆ: ಮನಮೋಹನ್ ಸಿಂಗ್ ಗೆ ಆಹ್ವಾನ

Pinterest LinkedIn Tumblr


ನವದೆಹಲಿ: ನವೆಂಬರ್ 9 ರಂದು ಆಯೋಜಿನೆಯಾಗಿರುವ ಕರ್ತಾರ್‌ಪುರ ಕಾರಿಡಾರ್ ಉದ್ಘಾಟನೆ ಕಾರ್ಯಕ್ರಮಕ್ಕೆ ಪಾಕಿಸ್ತಾನ ಸರ್ಕಾರ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಆಹ್ವಾನ ನೀಡಿದೆ. ಆದರೆ ಮಾಜಿ ಪ್ರಧಾನಿ ಸಿಂಗ್ ಅವರು ಪಾಕ್ ಆಹ್ವಾನವನ್ನು ತಿರಸ್ಕರಿಸುವ ಸಾಧ್ಯತೆ ಇದೆ.

ಕಾಂಗ್ರೆಸ್ ಮೂಲಗಳ ಪ್ರಕಾರ, ಮನಮೋಹನ್ ಸಿಂಗ್ ಅವರು ಪಾಕಿಸ್ತಾನ ನೀಡಿದ ಆಹ್ವಾನವನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದಾರೆ ಎನ್ನಲಾಗಿದೆಯ

“ಕರ್ತಾರ್‌ಪುರ ಕಾರಿಡಾರ್‌ನ ಉದ್ಘಾಟನಾ ಕಾರ್ಯಕ್ಕಾಗಿ ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ನಾವು ಆಹ್ವಾನವನ್ನು ನೀಡಲು ಬಯಸುತ್ತೇವೆ. ಅವರು ಸಿಖ್ಖ್ ಸಮುದಾಯವನ್ನು ಪ್ರತಿನಿಧಿಸುವವರೂ ಆಗಿದ್ದಾರೆ. ನಾವು ಅವರಿಗೆ ಅಧಿಕೃತ ಆಹ್ವಾನವನ್ನು ಕಳುಹಿಸುತ್ತೇವೆ” ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಅವರು ಹೇಳಿದ್ದರು.

ಕಾರಿಡಾರ್ ಉದ್ಘಾಟನಾ ಸಮಾರಂಭ ಗುರುನಾನಕ್ ದೇವ್ ಅವರ 550 ನೇ ಜನ್ಮ ದಿನಾಚರಣೆಯ ಮೂರು ದಿನಗಳ ಮೊದಲು ನಡೆಯಲಿದೆ. ಇದೇ ವೇಳೆ ಪಾಕಿಸ್ತಾನದ ಕರ್ತಾರ್‌ಪುರ್ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಿಂದ 20 ಡಾಲರ್ ಹಣವನ್ನು ಸೇವಾ ಶುಲ್ಕವನ್ನಾಗಿ ಪಡೆಯುವ ಪಾಕ್ ಕ್ರಮವನ್ನು ಮರುಪರಿಶೀಲಿಸುವಂತೆ ಭಾರತ ಕೇಳಿದೆ.

ಆರಂಭದಲ್ಲಿ, ಭಾರತದಿಂದ ಪ್ರತಿದಿನ 5,000 ಯಾತ್ರಾರ್ಥಿಗಳಿಗೆ ಭೇಟಿ ನೀಡಲು ಅವಕಾಶವಿರುತ್ತದೆ ಆದರೆ ನಂತರ ದಿನಕ್ಕೆ 10,000 ಯಾತ್ರಾರ್ಥಿಗಳಿಗೆ ಅವಕಾಶ ನೀಡಲಾಗುವುದು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಕಾರಿಡಾರ್ ಕರ್ತಾರ್‌ಪುರದ ದರ್ಬಾರ್ ಸಾಹಿಬ್ ಅನ್ನು ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ಡೇರಾ ಬಾಬಾ ನಾನಕ್ ದೇಗುಲದೊಂದಿಗೆ ಸಂಪರ್ಕಿಸುತ್ತದೆ ಮತ್ತು ಭಾರತೀಯ ಯಾತ್ರಿಕರ ವೀಸಾ ಮುಕ್ತ ಸಂಚಾರಕ್ಕೆ ಅನುಕೂಲವಾಗಲಿದೆ.

Comments are closed.