ರಾಷ್ಟ್ರೀಯ

ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶಕ್ಕೆ ನೂತನ ಲೆ.ಗೌವರ್ನರ್​ ಹುದ್ದೆಗೆ ಸತ್ಯಪಾಲ್ ಮಲ್ಲಿಕ್ ಹೆಸರು

Pinterest LinkedIn Tumblr


ನವದೆಹಲಿ: ಆಕ್ಟೋಬರ್​ 31ರಿಂದ ಕೇಂದ್ರಾಡಳಿತ ಪ್ರದೇಶವಾಗಿ ವರ್ಗೀಕರಣಗೊಳ್ಳಲಿರುವ ಜಮ್ಮು-ಕಾಶ್ಮೀರಕ್ಕೆ ಲೆಫ್ಟಿನೆಂಟ್ ಗೌವರ್ನರ್​ ಆಗಿ ಹಾಲಿ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ನೇಮಕಗೊಳ್ಳುವ ಮುಂಚೂಣಿಯಲ್ಲಿದ್ದಾರೆ.

ಸರ್ಕಾರದ ಉನ್ನತ ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಅತ್ಯುನ್ನತ ಹುದ್ದೆಗೆ ಇತರೆ ಕೆಲವು ಹೆಸರುಗಳು ಕೇಳಿಬರುತ್ತಿವೆಯಾದರೂ, ಸತ್ಯಪಾಲ್ ಮಲ್ಲಿಕ್​ ಹೆಸರು ಮುಂಚೂಣಿಯಲ್ಲಿದೆ. ಅಂತಿಮ ನಿರ್ಧಾರ ಶೀಘ್ರದಲ್ಲೇ ಹೊರಬೀಳಲಿದೆ. ಜಮ್ಮು-ಕಾಶ್ಮೀರದ ಪ್ರಸ್ತುತ ಸನ್ನಿವೇಶವನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಸತ್ಯಪಾಲ್ ಮಲ್ಲಿಕ್​ ಅತ್ಯುತ್ತಮ ಆಯ್ಕೆ. ಮತ್ತು ಒಂದು ವರ್ಷದಿಂದ ಈವರೆಗೂ ಜಮ್ಮು-ಕಾಶ್ಮೀರದ ಚುಕ್ಕಾಣಿ ಹಿಡಿದು, ಅದನ್ನು ಅತ್ಯುತ್ತಮವಾಗಿ ನಿಭಾಯಿಸಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಜಮ್ಮು-ಕಾಶ್ಮೀರ ರಾಜ್ಯಕ್ಕೆ ನೀಡಲಾಗಿದ್ದ ವಿಶೇಷ ಪ್ರಾತಿನಿಧ್ಯದ 370ನೇ ವಿಧಿಯನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರ ಮತ್ತು ಲಡಾಕ್​ ಅನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಘೋಷಣೆ ಮಾಡಿತು. ಇದೇ ತಿಂಗಳ 31ರಿಂದ ಈ ರಾಜ್ಯಗಳು ಕೇಂದ್ರಾಡಳಿತ ಪ್ರದೇಶಗಳಾಗಿ ಪರಿವರ್ತನೆಗೊಳ್ಳಲಿವೆ. ಮತ್ತು ಅದೇ ದಿನದಂದು ನೂತನ ಲೆಫ್ಟೆನೆಂಟ್​ ಗೌವರ್ನರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ನೂತನ ಕೇಂದ್ರಾಡಳಿತ ಪ್ರದೇಶಗಳ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಪೊಲೀಸ್ ವ್ಯವಸ್ಥೆ ಲೆಫ್ಟಿನೆಂಟ್ ಗೌವರ್ನರ್ ಮೂಲಕ ನೇರವಾಗಿ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿ ಬರಲಿದೆ. ರಾಜ್ಯದಲ್ಲಿ ಚುನಾಯಿತ ಸರ್ಕಾರದ ಅಧಿಕಾರ ವ್ಯಾಪ್ತಿ ಸೀಮಿತವಾಗಲಿದ್ದು, ಬಹುತೇಕ ನಿರ್ಣಯ, ತೀರ್ಮಾನ ಮತ್ತು ಅಧಿಕಾರದ ವ್ಯಾಪ್ತಿ ಲೆಫ್ಟಿನೆಂಟ್ ಗೌವರ್ನರ್ ಅಡಿಯಲ್ಲಿ ಬರುತ್ತವೆ.

Comments are closed.