ಚೆನ್ನೈ: ಜೀನ್ಸ್ ಹಾಗೂ ಸ್ಲೀವ್‌ಲೆಸ್ ಟಾಪ್ ಧರಿಸಿ ಚಾಲನಾ ಪರೀಕ್ಷೆಗೆ ಆಗಮಿಸಿದ ಸಾಫ್ಟ್‌ವೇರ್ ಕಂಪೆನಿಯ ಉದ್ಯೋಗಿಯೊಬ್ಬರನ್ನು ವಾಪಸ್ ಕಳುಹಿಸಿ ಸಭ್ಯ ಉಡುಗೆಯೊಂದಿಗೆ ಬರುವಂತೆ ಸೂಚಿಸಿರುವ ಘಟನೆ ನಗರದ ಕೆ.ಕೆ.ನಗರ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನಡೆದಿದೆ.
ಅಂತೆಯೇ ಮುಕ್ಕಾ ಪ್ಯಾಟ್ ಅಥವಾ ಕಾಪ್ರಿ ಧರಿಸಿ ಆಗಮಿಸಿದ್ದ ಮತ್ತೊಬ್ಬ ಮಹಿಳೆಯನ್ನು ಕೂಡಾ ವಾಪಸ್ ಕಳುಹಿಸಿ ಸಭ್ಯ ಉಡುಗೆ ಧರಿಸಿ ಬರುವಂತೆ ಸಲಹೆ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ವಾಸ್ತವವಾಗಿ ಚಾಲನಾ ಲೈಸನ್ಸ್‌ಗೆ ಅರ್ಜಿ ಸಲ್ಲಿಸುವವರಿಗೆ ವಸ್ತ್ರಸಂಹಿತೆ ಇಲ್ಲ. ಆದರೆ ಸಭ್ಯ ಉಡುಗೆ ಧರಿಸಿ ಚಾಲನಾ ಪರೀಕ್ಷೆಗೆ ಬರಬೇಕಾಗುತ್ತದೆ ಎಂದು ಪ್ರಾದೇಶಿಕ ಸಾರಿಗೆ ಇಲಾಖೆ ಸ್ಪಷ್ಟಪಡಿಸಿದೆ.
“ಪುರುಷರಾಗಿರಲಿ; ಮಹಿಳೆಯರಾಗಿರಲಿ ಸಭ್ಯ ಉಡುಗೆಯೊಂದಿಗೆ ಬರಬೇಕು ಎನ್ನುವುದು ಸಾಮಾನ್ಯ ಸಲಹೆ. ಇದು ನೈತಿಕ ಪೊಲೀಸ್‌ಗಿರಿ ಅಲ್ಲ” ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
“ಸಾರಿಗೆ ಕಚೇರಿಗೆ ಹಲವು ಬಗೆಯ ಜನ ಬರುತ್ತಾರೆ. ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂಬ ಕಾರಣಕ್ಕೆ ಸಭ್ಯ ಉಡುಗೆಯಲ್ಲಿ ಬರುವಂತೆ ಸೂಚಿಸಲಾಗುತ್ತದೆ. ಲುಂಗಿ ಹಾಗೂ ಚಡ್ಡಿ ಧರಿಸಿ ಬರುವ ಪುರುಷರಿಗೆ ಸೂಕ್ತ ಉಡುಪಿನೊಂದಿಗೆ ಬರುವಂತೆ ಹೇಳಲಾಗುತ್ತದೆ”
ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿ ಸರ್ಕಾರಿ ಕಚೇರಿಯಾಗಿದ್ದು, ಅರ್ಜಿದಾರರು ತಮ್ಮ ಕಚೇರಿಗೆ ಹೋಗುವಾಗ ಧರಿಸುವಂಥ ಸಭ್ಯ ಉಡುಪಿನೊಂದಿಗೆ ಬರುವಂತೆ ಸೂಚಿಸುವುದು ತಪ್ಪೇನೂ ಅಲ್ಲ ಎಂದು ಅಧಿಕಾರಿ ಸಮರ್ಥಿಸಿಕೊಂಡಿದ್ದಾರೆ.
Comments are closed.