ರಾಷ್ಟ್ರೀಯ

ಹೊರದೇಶದ ಗೋವು ಮಾತೆಯಲ್ಲ, ಆಂಟಿ ಎಂದ ಬಿಜೆಪಿ ನಾಯಕ!

Pinterest LinkedIn Tumblr


ಕೋಲ್ಕೊತಾ: ”ಭಾರತದ ಗೋವು ತಾಯಿಗೆ ಸಮಾನ. ಆದರೆ, ವಿದೇಶದ್ದು ಬರೀ ಮೃಗಗಳು. ಅವು ನಮ್ಮ ಆಂಟಿಯರಿಗೆ ಸಮಾನ!” – ಹೀಗೊಂದು ಹೇಳಿಕೆಯನ್ನು ನೀಡಿದ್ದಾರೆ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್‌ ಘೋಷ್‌. ಕೋಲ್ಕೊ­ತಾದಿಂದ 100 ಕಿ.ಮೀ. ದೂರದಲ್ಲಿರುವ ಬದ್ರ್ವಾನ್‌ನಲ್ಲಿ ನಡೆದ ‘ಗೋಪ ಅಷ್ಟಮಿ ಕಾರ್ಯಕ್ರಮ’ದ ಸಾರ್ವಜನಿಕ ಸಭೆಯಲ್ಲಿಅವರು ಮಾತನಾಡಿದರು.

”ನಾವು ವಿದೇಶದಿಂದ ಕೆಲವು ತಳಿಗಳನ್ನು ತರ್ತೀವಲ್ಲ. ಅವುಗಳು ದನಗಳೇ ಅಲ್ಲ. ಅವುಗಳೆಲ್ಲ ಬರೀ ಜಾನುವಾರುಗಳು. ವಿದೇಶಿ ತಳಿಗಳು ಗೋವಿನ ತರ ಅನಿಸೋದೇ ಇಲ್ಲ. ಅವುಗಳನ್ನು ಗೋಮಾತೆ ಎಂದು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಅವು ಏನಿದ್ದರೂ ಆಂಟಿಯರು, ಅಂಥ ಆಂಟಿಯರನ್ನು ಪೂಜೆ ಮಾಡಿದರೆ ದೇಶಕ್ಕೆ ಒಳ್ಳೆಯದಲ್ಲ” ಎಂದಿದ್ದಾರೆ ಘೋಷ್‌.

”ಹಸು ನಮ್ಮ ತಾಯಿ. ಹಸುವಿನ ಹಾಲು ಕುಡಿದೇ ನಾವು ಜೀವಂತವಾಗಿರುವುದು. ಹಾಗಾಗಿ ಯಾರಾದರೂ ನನ್ನ ತಾಯಿ ಜತೆ ಕೆಟ್ಟದಾಗಿ ನಡೆದು­ಕೊಂಡರೆ, ಅವರ ಜತೆಯೂ ಹಾಗೆಯೇ ನಡೆದು­ಕೊಳ್ಳುತ್ತೇವೆ. ಭಾರತದ ಪವಿತ್ರ ಮಣ್ಣಿನಲ್ಲಿ ಗೋವು­ಗಳನ್ನು ಕೊಲ್ಲುವುದು ಮತ್ತು ಗೋಮಾಂಸ ಸೇವನೆ ಮಹಾ ಅಪರಾಧ,” ಎನ್ನುವುದು ಘೋಷ ವಾಕ್ಯ.

ಹಾಲಿನ ಬಣ್ಣಕ್ಕೆ ಬಂಗಾರ ಕಾರಣ: ನಮ್ಮ ದೇಸೀ ಹಸುಗಳಿಗೆ ಒಂದು ವಿಶೇಷವಾದ ಗುಣವಿದೆ. ಅವುಗಳ ಹಾಲಿನಲ್ಲಿ ಬಂಗಾರ ಸೇರಿಕೊಂಡಿದೆ. ಅದಕ್ಕೇ ಹಾಲು ಬಂಗಾರ ವರ್ಣ ಹೊಂದಿರುವುದು. ಗೋವುಗಳಿಗೆ ಒಂದು ವಿಶೇಷವಾದ ರಕ್ತನಾಳವಿದೆ. ಅದು ಸೂರ್ಯನ ಬೆಳಕನ್ನು ಬಳಸಿಕೊಂಡು ಬಂಗಾರವನ್ನು ಉತ್ಪಾದಿಸುತ್ತದೆ ಎಂದು ಅವರು ಹೇಳಿದರು.

ಪ್ಯಾಂಟ್‌ ಬಿಚ್ಚಿಸ್ತೇನೆ ಎಂದಿದ್ದ ಘೋಷ್‌!
ಘೋಷ್‌ ಅವರು ವಿವಾದಾತ್ಮಕ ಹೇಳಿಕೆ ನೀಡುವುದು ಹೊಸತೇನೂ ಅಲ್ಲ. ಕಳೆದ ಆಗಸ್ಟ್‌ನಲ್ಲಿ ತೃಣಮೂಲ ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಪೊಲೀಸರಿಗೆ ಥಳಿಸುವಂತೆ ಬಿಜೆಪಿ ಕಾರ್ಯಕರ್ತರನ್ನು ಪ್ರಚೋದಿಸಿದ್ದರು. ”ಬಟ್ಟೆ ಬಿಚ್ಚಿ ಹೊಡೆಯುತ್ತೇವೆ,” ಎಂದು ಪೊಲೀಸರಿಗೆ ಎಚ್ಚರಿಕೆ ನೀಡಿದ್ದರು.

”ರಾಮ ನವಮಿ ಹೋರ್ಡಿಂಗ್‌ನಿಂದ ನನ್ನ ಫೋಟೊ ತೆಗೆದರೆ ನಿಮ್ಮ ಪ್ಯಾಂಟ್‌ ಬಿಚ್ಚಿಸ್ತೇನೆ,” ಎಂದು ಚುನಾವಣಾ ಆಯೋಗಕ್ಕೆ ಬೆದರಿಕೆ ಹಾಕಿದ್ದರು!

Comments are closed.