ಅಹಮದಾಬಾದ್ : ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ಮತ್ತು ಇತರೆ ಅತಿ ಗಣ್ಯರ ಓಡಾಟಕ್ಕೆ ಅಲ್ಲಿನ ಬಿಜೆಪಿ ಸರ್ಕಾರ 191 ಕೋಟಿ ರೂ. ಮೌಲ್ಯದ ವಿಮಾನವೊಂದನ್ನು ಖರೀದಿಸಿದೆ.
ಎರಡು ಎಂಜಿನ್ ಉಳ್ಳ ಬಾಂಬಾರ್ಡೀರ್ ಚಾಲೆಂಜರ್ 650 ವಿಮಾನವು ಇನ್ನು ಎರಡು ವಾರಗಳಲ್ಲಿ ಗುಜರಾತ್‌ಗೆ ತಲುಪಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ಅವರಲ್ಲದೆ ರಾಜ್ಯಪಾಲರು, ಉಪ ಮುಖ್ಯಮಂತ್ರಿ ಸೇರಿದಂತೆ ಇತರೆ ಅತಿ ಗಣ್ಯ ವ್ಯಕ್ತಿಗಳಿಗೆ ಮಾತ್ರ ಈ ವಿಮಾನ ಸೌಲಭ್ಯ ದೊರಕಲಿದೆ. ಐದು ವರ್ಷಗಳ ಹಿಂದೆಯೇ ವಿಮಾನ ಖರೀದಿಯ ಪ್ರಕ್ರಿಯೆಯನ್ನು ಆರಂಭಿಸಲಾಗಿತ್ತು.
ಈ ಹೊಸ ವಿಮಾನದಲ್ಲಿ 12 ಪ್ರಯಾಣಿಕರು ತೆರಳಬಹುದಾಗಿದೆ. ಗಂಟೆಗೆ 870 ಕಿ.ಮೀ. ವೇಗದಲ್ಲಿ, 7000 ಕಿ.ಮೀ. ವ್ಯಾಪ್ತಿಯವರೆಗೆ ಇದು ಹಾರಾಡಬಲ್ಲದು. ಕಳೆದ 20 ವರ್ಷಗಳಿಂದ ಮುಖ್ಯಮಂತ್ರಿ ಮತ್ತು ಇತರೆ ವಿವಿಐಪಿಗಳು ಬಳಸುತ್ತಿರುವ ಬೀಚ್‌ಕ್ರಾಫ್ಟ್ ಸೂಪರ್ ಕಿಂಗ್ ವಿಮಾನಕ್ಕಿಂತಲೂ ಎತ್ತರದಲ್ಲಿ ಇದು ಸಾಗುತ್ತದೆ.
ಆರ್ಥಿಕ ಕುಸಿತದ ನಡುವೆಯೂ ದುಬಾರಿ ವಿಮಾನ ಖರೀದಿ ಮಾಡಿರುವ ಗುಜರಾತ್ ಸರ್ಕಾರದ ನಿರ್ಧಾರಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
191 ಕೋಟಿ ರೂ ವೆಚ್ಚ
‘ಬಾಂಬಾರ್ಡೀರ್ ತಯಾರಿಸಿರುವ 191 ಕೋಟಿ ರೂ ವೆಚ್ಚದ ಚಾಲೆಂಜರ್ 650 ವಿಮಾನವು ಗುಜರಾತ್ ಸರ್ಕಾರಕ್ಕೆ ಈ ತಿಂಗಳ ಮೂರನೇ ವಾರದಲ್ಲಿ ಸಿಗಲಿದೆ. ಅದನ್ನು ಖರೀದಿಸುವ ಎಲ್ಲ ಸಂಬಂಧಿತ ಪ್ರಕ್ರಿಯೆಗಳನ್ನೂ ಪೂರ್ಣಗೊಳಿಸಲಾಗಿದೆ. ಐದು ವರ್ಷದ ಹಿಂದೆಯೇ ಈ ಪ್ರಯತ್ನ ಆರಂಭವಾಗಿತ್ತು. ಕೊನೆಗೂ ಮೂರನೇ ಬಿಡ್‌ನಲ್ಲಿ ಪ್ರಯತ್ನ ಯಶಸ್ವಿಯಾಯಿತು’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಸ್ತುತ ಗುಜರಾತ್ ಸರ್ಕಾರವು ಅತಿ ಗಣ್ಯರ ಓಡಾಟಕ್ಕೆ ಬೀಚ್‌ಕ್ರಾಫ್ಟ್ ಸೂಪರ್ ಕಿಂಗ್ ಟರ್ಬೋಪ್ರಾಪ್ ವಿಮಾನವನ್ನು ಹೊಂದಿದೆ. ಇದು ಒಮ್ಮೆಗೆ ಒಂಬತ್ತು ಪ್ರಯಾಣಿಕರನ್ನು ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ. ಮುಖ್ಯಮಂತ್ರಿ ಮತ್ತು ಇತರೆ ಗಣ್ಯರನ್ನು ಕರೆದೊಯ್ಯಲು ಇರುವ ಏಕಮಾತ್ರ ವಿಮಾನವಾಗಿತ್ತು. ಕಳೆದ 20 ವರ್ಷಗಳಿಂದ ಇದು ಸೇವೆಯಲ್ಲಿದೆ.
ಈ ಹೊಸ ವಿಮಾನವು ಹಾಲಿ ವಿಮಾನಕ್ಕಿಂತಲೂ ಹೆಚ್ಚಿನ ವ್ಯಾಪ್ತಿಯಲ್ಲಿ ಹಾರಾಡಬಲ್ಲದು. ನೆರೆಯ ಚೀನಾದಂತಹ ದೇಶಕ್ಕೆ ಕೂಡ ವಿವಿಐಪಿಗಳನ್ನು ಕರೆದುಕೊಂಡು ಹೋಗಬಲ್ಲದು. ಬೀಚ್‌ಕ್ರಾಫ್ಟ್ ಸೂಪರ್ ಕಿಂಗ್ ಹೆಚ್ಚು ವ್ಯಾಪ್ತಿಯಲ್ಲಿ ಹಾರಾಟ ನಡೆಸಲು ಸಾಧ್ಯವಾಗದ ಕಾರಣ ರಾಜ್ಯ ಸರ್ಕಾರವು ಮುಖ್ಯಮಂತ್ರಿಗಳ ದೂರದ ಪ್ರಯಾಣಗಳಿಗೆ ಖಾಸಗಿ ವಿಮಾನಗಳನ್ನು ಬಾಡಿಗೆಗೆ ಪಡೆದುಕೊಳ್ಳುತ್ತಿತ್ತು. ಈ ರೀತಿ ಬಾಡಿಗೆಗೆ ಪಡೆದುಕೊಳ್ಳುವುದರಿಂದ ಗಂಟೆಗೆ ಒಂದು ಲಕ್ಷ ರೂ. ಅಥವಾ ಅದಕ್ಕಿಂತಲೂ ಹೆಚ್ಚು ವೆಚ್ಚವಾಗುತ್ತದೆ. ಹೀಗಾಗಿ ಹೊಸ ವಿಮಾನವನ್ನು ಖರೀದಿ ಮಾಡಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಬೀಚ್‌ಕ್ರಾಫ್ಟ್ ವಿಮಾನವು ಸೀಮಿತ ಹಾರಾಟ ವ್ಯಾಪ್ತಿ ಹೊಂದಿರುವ ಕಾರಣ ಅದರಲ್ಲಿ ಹೆಚ್ಚುವರಿ ಇಂಧನವನ್ನು ಕೂಡ ಸಾಗಿಸಬೇಕಾಗಿತ್ತು. ಹಳೆಯ ವಿಮಾನಕ್ಕೆ ಇಂಧನ ತುಂಬಿಸುವುದೇ ದೊಡ್ಡ ಸಮಸ್ಯೆಯಾಗಿತ್ತು . ಈ ಸಮಸ್ಯೆ ಹೊಸ ವಿಮಾನದಲ್ಲಿಲ್ಲ. ಈ ಮಿತಿಯಿಂದಾಗಿ ಬೀಚ್‌ಕ್ರಾಫ್ಟ್ ವಿಮಾನವು ಅಹಮದಾಬಾದ್‌ನಿಂದ ಗುವಾಹಟಿಗೆ ತೆರಳಲು ಐದು ಗಂಟೆ ತೆಗೆದುಕೊಳ್ಳುತ್ತಿತ್ತು. ಈ ಹೊಸ ವಿಮಾನವು ಇಂಧನ ಮರುಪೂರಣ ಮಾಡದೆಯೇ ಈ ದೂರವನ್ನು ಎರಡೇ ಗಂಟೆಯಲ್ಲಿ ಕ್ರಮಿಸುತ್ತದೆ ಎಂದು ಹೇಳಿದ್ದಾರೆ.
Comments are closed.