ರಾಷ್ಟ್ರೀಯ

ಅಸ್ಸಾಂ ಮುಸ್ಲಿಮರಿಂದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ 5 ಲಕ್ಷ ರೂ. ದೇಣಿಗೆ!

Pinterest LinkedIn Tumblr


ಗುವಾಹಟಿ (ನ. 10): 5 ಶತಮಾನಗಳ ಕಾಲ ಚರ್ಚೆಗೊಳಗಾಗಿದ್ದ ಅಯೋಧ್ಯೆಯ ರಾಮಜನ್ಮಭೂಮಿ- ಬಾಬ್ರಿ ಮಸೀದಿ ಪ್ರಕರಣಕ್ಕೆ ಕೊನೆಗೂ ಅಂತ್ಯ ಸಿಕ್ಕಿದೆ. ನಿನ್ನೆ ಅಯೋಧ್ಯೆ ಪ್ರಕರಣದ ಕುರಿತು ಸುಪ್ರೀಂಕೋರ್ಟ್​ ಐತಿಹಾಸಿಕ ತೀರ್ಪು ನೀಡಿದೆ. ಅಯೋಧ್ಯೆಯ ವಿವಾದಿತ ಸ್ಥಳವನ್ನು ರಾಮಲಲ್ಲಾಗೆ ನೀಡಿ ಸುನ್ನಿ ವಕ್ಫ್​ ಬೋರ್ಡ್​ಗೆ ಬೇರೆ ಕಡೆ 5 ಎಕರೆ ಜಾಗ ನೀಡಲು ಸುಪ್ರೀಂಕೋರ್ಟ್​ ಸೂಚಿಸಿದೆ.

ಈಗಾಗಲೇ ಉತ್ತರ ಪ್ರದೇಶ ಸರ್ಕಾರ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ನೀಲನಕ್ಷೆ ಸಿದ್ಧಪಡಿಸಿದೆ. ಕೇಂದ್ರ ಸರ್ಕಾರ ರಚಿಸುವ ಟ್ರಸ್ಟ್​ನಿಂದ ರಾಮಮಂದಿರ ನಿರ್ಮಾಣಕ್ಕೆ ಒಪ್ಪಿಗೆ ಸಿಗುತ್ತಿದ್ದಂತೆ ನಿರ್ಮಾಣ ಕಾರ್ಯಗಳು ಆರಂಭವಾಗಲಿವೆ. ಸುಪ್ರೀಂ ತೀರ್ಪನ್ನು ಎರಡೂ ಸಮುದಾಯಗಳು ಸಮಾನ ಮನಸ್ಥಿತಿಯಿಂದ ಸ್ವೀಕರಿಸಿರುವುದರಿಂದ ಯಾವುದೇ ಗಲಭೆಗಳು ನಡೆದಿಲ್ಲ.

ಇದೀಗ ಹಿಂದೂ-ಮುಸ್ಲಿಮರ ನಡುವೆ ಸೌಹಾರ್ದತೆ ಸಾರುವ ಸಂಕೇತವಾಗಿ ಅಸ್ಸಾಂನ 21 ಮುಸ್ಲಿಂ ಸಂಘಟನೆಗಳು ರಾಮ ಮಂದಿರ ನಿರ್ಮಾಣಕ್ಕೆ 5 ಲಕ್ಷ ರೂ. ನೀಡುವುದಾಗಿ ಘೋಷಿಸಿವೆ. ಅಸ್ಸಾಂನ ಮುಸ್ಲಿಂ ಸಮುದಾಯಗಳು 21 ಸಂಘಟನೆಗಳನ್ನು ಹೊಂದಿದ್ದು, 5 ಲಕ್ಷ ರೂಪಾಯಿ ರಾಮ ಮಂದಿರ ನಿರ್ಮಾಣಕ್ಕಾಗಿ ನೀಡುವುದಾಗಿ ಹೇಳಿವೆ.

ವಿವಾದಿತ ಜಾಗದ ಗೊಂದಲ ಕೊನೆಗೂ ನಿವಾರಣೆ ಆಯಿತೆಂದು ನಮಗೆ ಖುಷಿಯಾಗುತ್ತಿದೆ. ಸುಪ್ರೀಂಕೋರ್ಟ್​ ಈ ಪ್ರಕರಣದಲ್ಲಿ ಐತಿಹಾಸಿಕ ತೀರ್ಪು ನೀಡಿದೆ. ಈ ಐತಿಹಾಸಿಕ ತೀರ್ಪಿನ ಭಾಗವಾಗಲು ನಾವು ಇಚ್ಛಿಸುತ್ತೇವೆ. ಹೀಗಾಗಿ, ರಾಮ ಮಂದಿರ ನಿರ್ಮಾಣಕ್ಕೆ ನಾವೂ 5 ಲಕ್ಷ ದೇಣಿಗೆ ನೀಡಲು ಮುಂದಾಗಿದ್ದೇವೆ. ನಮ್ಮ ಈ ನಡೆ ಹಿಂದು-ಮುಸ್ಲಿಂ ಸಮುದಾಯದ ಒಗ್ಗಟ್ಟಿಗೆ ಸಾಕ್ಷಿಯಾಗಲಿದೆ ಎಂಬ ವಿಶ್ವಾಸ ನಮಗಿದೆ ಎಂದು ಜೊನೋಗುಸ್ತ್ಯ ಸೊಮೊನ್ನೊಯ್ ಪರಿಷದ್ ಅಸೋಮ್ (ಜೆಎಸ್​ಪಿಎ) ಚೇರ್ಮನ್ ಸೈಯದ್ ಮುಮಿನುಲ್ ಅವಾಲ್ ಹೇಳಿದ್ದಾರೆ.

Comments are closed.