ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಜ್ಜಾಗಿದ್ದ ಭಯೋತ್ಪಾದಕರ ಕುಟಿಲ ಯತ್ನವೊಂದನ್ನು ಭದ್ರತಾ ಪಡೆಗಳು ವಿಫಲಗೊಳಿಸಿವೆ. ಈ ಕಾರ್ಯಾಚರಣೆಯಲ್ಲಿ ಮೂವರು ಉಗ್ರಗಾಮಿಗಳು ಹತರಾಗಿದ್ದು, ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಉತ್ತರ ಕಾಶ್ಮೀರದ ಬಂಡಿಪೋರ ಜಿಲ್ಲೆಯ ನಿರ್ಜನ ಪ್ರದೇಶದಲ್ಲಿ ಉಗ್ರರು ಅಡಗಿದ್ದು, ದಾಳಿಗೆ ಹೊಂಚು ಹಾಕುತ್ತಿದ್ದಾರೆ ಎಂಬ ಖಚಿತ ಸುಳಿವಿನ ಮೇರೆಗೆ ಭದ್ರತಾ ಪಡೆಗಳು ನಿನ್ನೆ ರಾತ್ರಿಯಿಂದ ಆ ಪ್ರದೇಶವನ್ನು ಸುತ್ತುವರೆದು ತೀವ್ರ ಶೋಧ ನಡೆಸುತ್ತಿದ್ದರು. ಇಂದು ಮುಂಜಾನೆ ಶೋಧ ಕಾರ್ಯಾಚರಣೆ ಮುಂದುವರೆದಾಗ ಮರೆಯಲ್ಲಿ ಅಡಗಿದ್ದ ಉಗ್ರರು ಯೋಧರತ್ತ ಗುಂಡು ಹಾರಿಸಿದರು.
ಈ ಸಂದರ್ಭದಲ್ಲಿ ಭದ್ರತಾ ಪಡೆಗಳು ಪ್ರತಿಯಾಗಿ ಗುಂಡು ಹಾರಿಸಿದಾಗ ಎನ್‍ಕೌಂಟರ್ ನಡೆಯಿತು. ಈ ಗುಂಡಿನ ಕಾಳಗದಲ್ಲಿ ಇಬ್ಬರು ಉಗ್ರರು ಹತರಾದರು. ಹತರಾದ ಆತಂಕವಾದಿಗಳಿಂದ ಕಲಾಶ್ನಿಕೋವ್ ರೈಫಲ್‍ಗಳು (ಎಕೆ-47, ಎಕೆ-56), ಮದ್ದುಗುಂಡುಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆಯಲ್ಲಿ ಉಗ್ರರ ಜೊತೆಗಿದ್ದ ಮತ್ತೊಬ್ಬ ಉಗ್ರ ಪರಾರಿಯಾಗಿರುವ ಸಾಧ್ಯತೆ ಇದ್ದು, ಆತನಿಗಾಗಿ ತೀವ್ರ ಶೋಧ ಮುಂದುವರೆದಿದೆ.
ಈ ಕಾರ್ಯಾಚರಣೆಯಿಂದ ಕಾಶ್ಮೀರದಲ್ಲಿ ನಡೆಯಬಹುದಾಗಿದ್ದ ವಿಧ್ವಂಸಕ ಕೃತ್ಯ ತಪ್ಪಿದಂತಾಗಿದೆ. ನಿನ್ನೆ ರಾತ್ರಿ ಶ್ರೀನಗರದಿಂದ 55 ಕಿಲೋ ಮೀಟರ್ ದೂರದಲ್ಲಿರುವ ಲಾದಾರ ಪ್ರದೇಶದಲ್ಲಿ ಯೋಧರೊಂದಿಗೆ ನಡೆದ ಮತ್ತೊಂದು ಗುಂಡಿನ ಕಾಳಗದಲ್ಲಿ ಮತ್ತೊಬ್ಬ ಉಗ್ರ ಹತನಾಗಿದ್ದಾನೆ. ಮೃತನ ಬಳಿ ಇದ್ದ ರೈಫಲ್ ಮತ್ತು ಮದ್ದುಗುಂಡುಗಳನ್ನು ಯೋಧರು ವಶಪಡಿಸಿಕೊಂಡಿದ್ದಾರೆ.
Comments are closed.