ರಾಷ್ಟ್ರೀಯ

ಐಐಟಿ ಮದ್ರಾಸ್‌ ಟಾಪರ್‌ ವಿದ್ಯಾರ್ಥಿನಿ ಸಾವು: ಪ್ರೊಫೆಸರ್‌ ಕೈವಾಡ?

Pinterest LinkedIn Tumblr


ಚೆನ್ನೈ: ಐಐಟಿ ಮದ್ರಾಸ್ ವಿದ್ಯಾರ್ಥಿನಿ ಫಾತಿಮಾ ಲತೀಫ್‌ ಅನುಮಾನಾಸ್ಪದ ಸಾವು ಪ್ರಕರಣ ಕಾವು ಪಡೆದುಕೊಳ್ಳುತ್ತಿದೆ. ಈ ಪ್ರಕರಣವನ್ನು ಆತ್ಮಹತ್ಯೆ ಎಂದು ಪೊಲೀಸರು ಕೇಸ್‌ ದಾಖಲಿಸಿಕೊಂಡಿದ್ದರೂ, ಆಕೆಯ ಸಾವಿನ ಹಿಂದೆ ಪ್ರೊಫೆಸರ್‌ ಒಬ್ಬರು ಇದ್ದಾರೆ ಎಂದು ಮೃತ ವಿದ್ಯಾರ್ಥಿನಿಯ ಪೋಷಕರು ಆರೋಪಿಸಿದ್ದಾರೆ.

ಐಐಟಿ ಮದ್ರಾಸ್‌ನ ಪ್ರಥಮ ವರ್ಷದ 18 ವರ್ಷದ ವಿದ್ಯಾರ್ಥಿನಿ ಫಾತಿಮಾ ಲತೀಫ್‌ ಮೂರು ದಿನಗಳ ಹಿಂದೆ ಸಾವಿಗೀಡಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಆಕೆ, ಒಂದು ವಿಷಯವನ್ನು ಹೊರತುಪಡಿಸಿ ಇನ್ನುಳಿದ ಎಲ್ಲ ಸಬ್ಜೆಕ್ಟ್‌ನಲ್ಲಿ ಟಾಪರ್‌ ಆಗಿದ್ದಳು ಎಂದು ತಿಳಿದುಬಂದಿದೆ. ಅಲ್ಲದೆ, ಪೋಷಕರು ಆರೋಪಿಸಿರುವ ಪ್ರೊಫೆಸರ್‌ ಪಾಠ ಮಾಡುತ್ತಿದ್ದ ವಿಷಯದಲ್ಲೇ ಆಕೆ ಎರಡನೇ ಟಾಪರ್‌ ಆಗಿ ಹೊರಹೊಮ್ಮಿದ್ದಾಳೆ ಎಂಬ ವಿಷಯವೂ ಬೆಳಕಿಗೆ ಬಂದಿದೆ.

ಈ ಹಿನ್ನೆಲೆ ಕೇರಳ ಸಿಎಂ ಪಿಣರಾಯಿ ವಿಜಯನ್‌ರನ್ನು ಭೇಟಿ ಮಾಡಿದ ಮೃತ ವಿದ್ಯಾರ್ಥಿನಿಯ ಪೋಷಕರು, ಈ ಪ್ರಕರಣದ ತಮಿಳುನಾಡು ಪೊಲೀಸರ ತನಿಖೆಯಲ್ಲಿ ರಾಜ್ಯ ಸರಕಾರ ಹಸ್ತಕ್ಷೇಪ ವಹಿಸಬೇಕೆಂದು ಸಿಎಂಗೆ ಮನವಿ ಸಲ್ಲಿಸಿದ್ದಾರೆ.

ಪ್ರಥಮ ವಷದ ಎಂಎ (ಮಾನವಿಕ ಮತ್ತು ಅಭಿವೃದ್ಧಿ ಅಧ್ಯಯನಗಳು (ಸಂಯೋಜಿತ)) ವಿದ್ಯಾರ್ಥಿನಿಯಾಗಿದ್ದ ಫಾತಿಮಾ ಲತೀಫ್‌ ಕೇರಳದ ಕೊಲ್ಲಂ ಮೂಲದವಳಾಗಿದ್ದು, ಶನಿವಾರ ಬೆಳಗ್ಗೆ ಐಐಟಿ ಮದ್ರಾಸ್‌ ಹಾಸ್ಟೆಲ್‌ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಫಾತಿಮಾ ಅದ್ಭುತ ವಿದ್ಯಾರ್ಥಿ ಮತ್ತು ಕ್ಲಾಸ್ ಟಾಪರ್ ಆಗಿದ್ದಳು ಎಂದು ಆಕೆಯ ಶಿಕ್ಷಕರು ಸ್ಮರಿಸಿಕೊಂಡಿದ್ದಾರೆ.

ತಮಿಳುನಾಡು ಪೊಲೀಸರು ವಿದ್ಯಾರ್ಥಿನಿಯ ಸಾವನ್ನು ಅಸ್ವಾಭಾವಿಕ ಸಾವು (ಆತ್ಮಹತ್ಯೆ) ಎಂದು ಕೇಸ್‌ ದಾಖಲಿಸಿಕೊಂಡಿದ್ದು, ಡೆತ್‌ ನೋಟ್‌ ಸಿಕ್ಕಿಲ್ಲ ಎಂದು ಹೇಳಿಕೊಂಡಿದ್ದಾರೆ. ಆದರೆ, ಫಾತಿಮಾಳ ಮೊಬೈಲ್‌ ಫೋನ್‌ನಲ್ಲಿ ದಾಖಲೆಯೊಂದು ದೊರೆತಿದೆ. ಅದರಲ್ಲಿ ಶಿಕ್ಷಕರೊಬ್ಬರ ಹೆಸರನ್ನು ತನ್ನ ಮಗಳು ಪ್ರಸ್ತಾಪಿಸಿದ್ದಾಳೆ. ನನ್ನ ಸಾವಿಗೆ ಆ ಪ್ರೊಫೆಸರ್‌ ಕಾರಣ ಎಂದೂ ಬರೆಯಲಾಗಿದೆ ಎಂದು ಫಾತಿಮಾರ ತಂದೆ ಲತೀಫ್‌ ಹೇಳಿಕೊಂಡಿದ್ದಾರೆ. ಅಲ್ಲದೆ, ಸಿಎಂ ಪಿಣರಾಯಿ ವಿಜಯನ್‌ರನ್ನು ಭೇಟಿ ಮಾಡಿದ್ದಲ್ಲದೆ ಪ್ರಧಾನಿ ಮೋದಿಗೂ ಅವರುತನ್ನ ಮಗಳಿಗೆ ನ್ಯಾಯ ಒದಗಿಸಬೇಕೆಂದು ಮನವಿ ಮಾಡಿದ್ದಾರೆ.

ಸದ್ಯ, ವಿದ್ಯಾರ್ಥಿನಿಯ ಮೊಬೈಲ್‌ ಫೋನ್‌ ಪೊಲೀಸರ ಕಸ್ಟಡಿಯಲ್ಲಿದೆ.

ವಿದ್ಯಾರ್ಥಿನಿಯ ಸಾವಿನ ಸಂಬಂಧ ಪ್ರತಿಕ್ರಿಯೆ ನೀಡಿದ ಮಾನವಿಕ ವಿಭಾಗದ ಮುಖ್ಯಸ್ಥ ಉಮಾಕಾಂತ್, ಎಲ್ಲ ವಿದ್ಯಾರ್ಥಿಗಳು, ಪ್ರೊಫೆಸರ್‌ಗಳು ಆಕೆಯ ಸಾವಿನ ಬಗ್ಗೆ ಯಾವುದೇ ಸುಳಿವು ಇಲ್ಲ ಎಂದಿದ್ದಾರೆ.

ಆಕೆ ಆತ್ಮಹತ್ಯಾ ಪ್ರವೃತ್ತಿಯನ್ನು ಪ್ರತಿಬಿಂಬಿಸುವಂತಹ ಯಾವುದೇ ಹೇಳಿಕೆಗಳನ್ನು ಎಂದಿಗೂ ನೀಡುತ್ತಿರಲಿಲ್ಲ. ಮನೋರೋಗದ ಯಾವುದೇ ಲಕ್ಷಣಗಳೂ ಇರಲಿಲ್ಲ. ಹೀಗಾಗಿ ಈ ಸಾವಿನ ಹಿಂದೆ ರಹಸ್ಯವಿದೆ. ಪೊಲೀಸರು ಸಿಸಿ ಕ್ಯಾಮರಾ ಫೂಟೇಜ್‌ಗಳ ತನಿಖೆ ನಡೆಸಬೇಕೆಂದು ಒತ್ತಾಯಿಸುತ್ತೇವೆ ಎಂದು ಫಾತಿಮಾರ ತಂದೆ ಲತೀಫ್‌ ಒತ್ತಾಯಿಸಿದ್ದಾರೆ.

Comments are closed.