ನವದೆಹಲಿ : ಭಾರತದ ಪೂರ್ವಭಾಗದ ಆಚೆ ಇರುವ ಹಿಂದೂ ಮಹಾಸಾಗರದಲ್ಲಿ ಚೀನೀ ನೌಕೆಗಳ ಉಪಸ್ಥಿತಿಯ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಕಟ್ಟೆಚ್ಚರ ವಹಿಸಿದೆ. ಹಿಂದೂ ಮಹಾಸಾಗರದ ಭಾರತದ ವ್ಯಾಪ್ತಿಯ ಜಲಪ್ರದೇಶದೊಳಗೆ ಏಳೆಂಟು ಚೀನೀ ನೌಕೆಗಳು ಇರುವುದು ತಮ್ಮ ಗಮನಕ್ಕೆ ಬಂದಿದೆ. ಒಂದು ಚೀನೀ ಹಡಗನ್ನು ಹಿಮ್ಮೆಟ್ಟಿಸಿದ್ದೇವೆ ಎಂದು ಭಾರತೀಯ ನೌಕಾ ಪಡೆ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ತಿಳಿಸಿದ್ದಾರೆ.
ಡಿ. 4ರಂದು ನಡೆಯಲಿರುವ ನೌಕಾ ದಿನಾಚರಣೆಗೆ ಪೂರ್ವಭಾವಿಯಾಗಿ ಇವತ್ತು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅಡ್ಮಿರಲ್ ಕರಂಬೀರ್ ಸಿಂಗ್, 2008ರಿಂದಲೂ ಹಿಂದೂ ಮಹಾಸಾಗರದಲ್ಲಿ ಕಾಣಿಸುತ್ತಿರುವ ಚೀನಾದ ನೌಕೆಗಳನ್ನು ನಾವು ಎಚ್ಚರಿಕೆಯಿಂದ ಗಮನಿಸುತ್ತಾ ಬಂದಿದ್ದೇವೆ. ಹಿಂದೆಂದಿಗಿಂತಲೂ ಈಗ ಉಗ್ರಗಾಮಿಗಳಿಂದ ದಾಳಿ ಸಂಭವ ಹೆಚ್ಚಿರುವ ಹಿನ್ನೆಲೆಯಲ್ಲಿ ಈಗ ಹೆಚ್ಚು ನಿಗಾ ವಹಿಸಿದ್ದೇವೆ. ಯಾವುದೇ ಸನ್ನಿವೇಶಕ್ಕೂ ನಮ್ಮ ನೌಕಾ ಪಡೆ ಸಿದ್ಧವಿದೆ ಎಂದು ಸ್ಪಷ್ಟಪಡಿಸಿದ್ದಾರೆ.
‘ಚೀನಾದ ಈ ನೌಕೆಗಳು ಸಾಗರ ಅಧ್ಯಯನದ ಉದ್ದೇಶವಿರುವವು. ಭಾರತದ ವಿಶೇಷ ಆರ್ಥಿಕ ವಲಯದಲ್ಲಿ ಸರಾಸರಿಯಾಗಿ ಏಳೆಂಟು ಚೀನೀ ಹಡಗುಗಳು ಕಾಣಿಸುತ್ತಿವೆ. ಈ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಕೆಲವೊಮ್ಮೆ ಇವು ಬರುತ್ತವೆ. ಕಡಲ್ಗಳ್ಳನ ನಿಗ್ರಹ ತಂಡದ ಭಾಗವಾಗಿಯೂ ಇಲ್ಲಿ ಆಗಮಿಸುವುದಿದೆ. ಭಾರತದ ಹಿತಾಸಕ್ತಿಗೆ ಧಕ್ಕೆಯಾಗುವುದು ಕಂಡುಬಂದರೆ ನಾವು ಕ್ರಮ ಕೈಗೊಳ್ಳುತ್ತೇವೆ. ಶಿ ಯಾನ್ 1 ಎಂಬ ಒಂದು ನೌಕೆಯನ್ನು ನಾವು ವಾಪಸ್ ಕಳುಹಿಸಿದ್ದೇವೆ’ ಎಂದು ನೌಕಾಪಡೆ ಮುಖ್ಯಸ್ಥರು ಹೇಳಿದ್ದಾರೆ.
‘ಪಾಕಿಸ್ತಾನದ ಉಗ್ರ ಸಂಘಟನೆಗಳು ಸಮುದ್ರ ಮಾರ್ಗದಲ್ಲಿ ಭಾರತವನ್ನು ಪ್ರವೇಶಿಸಲು ಯೋಜಿಸುತ್ತಿರುವ ಬಗ್ಗೆ ಗುಪ್ತಚರ ಮಾಹಿತಿ ಇದೆ. ಯಾವುದೇ ಸನ್ನಿವೇಶವನ್ನು ಎದುರಿಸಲು ಸಮರ್ಥವಿರುವ ರಕ್ಷಣಾ ವ್ಯವಸ್ಥೆ ಮಾಡಿದ್ದೇವೆ’ ಎಂದು ಅಡ್ವಮಿರಲ್ ಕರಂಬೀರ್ ಸಿಂಗ್ ತಿಳಿಸಿದ್ದಾರೆ.
ಮುಂಬರುವ ದಿನಗಳಲ್ಲಿ ಹಿಂದೂ ಮಹಾಸಾಗರದಲ್ಲಿ ಯುದ್ಧವಿಮಾನ ಹೊತ್ತೊಯ್ಯಬಲ್ಲ ಮೂರು ನೌಕೆಗಳನ್ನು ನಿಯೋಜಿಸುವ ಗುರಿ ಇದೆ. 2022ರಲ್ಲಿ ಇಂಥ ಒಂದು ನೌಕೆ ಕಾರ್ಯಾಚರಣೆಗೆ ಇಳಿಯಲಿದೆ. ಮಿಗ್-29ಕೆ ಯುದ್ಧವಿಮಾನವು ಈ ನೌಕೆಯ ಬತ್ತಳಿಕೆಯಲ್ಲಿರಲಿದೆ.
Comments are closed.