ರಾಷ್ಟ್ರೀಯ

5 ವರ್ಷದ ಪುತ್ರಿಯ ಎದುರು ಶಿಕ್ಷಕಿಯನ್ನು ಗುಂಡಿಟ್ಟು ಹತ್ಯೆ

Pinterest LinkedIn Tumblr


ಮೊಹಾಲಿ: ಶಾಲಾ ಶಿಕ್ಷಕಿಯೊಬ್ಬರನ್ನು ಆಕೆಯ ಐದು ವರ್ಷದ ಕಂದಮ್ಮನ ಮುಂದೆಯೇ ದುಷ್ಟರು ಗುಂಡಿಟ್ಟು ಕೊಂದಿರುವ ಭೀಕರ ಘಟನೆ ಪಂಜಾಬ್ ರಾಜ್ಯದ ಮೊಹಾಲಿಯಲ್ಲಿ ಗುರುವಾರ ನಡೆದಿದೆ. ಇಲ್ಲಿನ ಖರಾರ್ ಪಟ್ಟಣದಲ್ಲಿರುವ ನಾಲೆಡ್ಜ್ ಬಸ್ ಗ್ಲೋಬಲ್ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಸರಬ್ಜಿತ್ ಕೌರ್ ಎಂಬ ಶಿಕ್ಷಕಿಯೇ ಗುಂಡೇಟಿಗೆ ಬಲಿಯಾದವರಾಗಿದ್ದಾರೆ.

ಶಿಕ್ಷಕಿ ಕೌರ್ ಅವರು ತನ್ನ ದ್ವಿಚಕ್ರ ವಾಹನವನ್ನು ಶಾಲೆಯ ಆವರಣದಲ್ಲಿ ಪಾರ್ಕಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಆಕೆಯ ಮೇಲೆ ಮೂರು ಸುತ್ತು ಗುಂಡು ಹಾರಿಸಿದ್ದಾರೆ. ಈ ಸಂದರ್ಭದಲ್ಲಿ ಶಿಕ್ಷಕಿಯ ಜೊತೆಯಲ್ಲೇ ಇದ್ದ ಆಕೆಯ ಐದು ವರ್ಷದ ಮಗಳು ಭಯಗೊಂಡು ಕಿರುಚುತ್ತಾ ಓಡಿದ್ದಾಳೆ ಎಂದು ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಕೌರ್ ಅವರು ಇಲ್ಲಿನ ಬಾಡಿಗೆ ಅಪಾರ್ಟ್ ಮೆಂಟ್ ಒಂದರಲ್ಲಿ ತನ್ನ ಮಗಳ ಜೊತೆಯಲ್ಲಿ ವಾಸವಾಗಿದ್ದರು.

ಸರಬ್ಜಿತ್ ಕೌರ್ ಅವರು ವಿಚ್ಛೇದಿತೆಯಾಗಿದ್ದರು. ಫ್ರಾನ್ಸ್ ನಲ್ಲಿ ತನ್ನ ಪತಿಯೊಂದಿಗೆ ಇದ್ದ ಸಂದರ್ಭದಲ್ಲಿ ಪತಿಗೆ ಆಗಲೇ ಒಂದು ಮದುವೆಯಾಗಿ ಮಗುವೊಂದು ಇರುವ ವಿಚಾರ ಕೌರ್ ಅವರಿಗೆ ಗೊತ್ತಾಗಿ ತನ್ನ ಪತಿಯಿಂದ ವಿಚ್ಛೇದನ ಪಡೆದುಕೊಂಡಿದ್ದರು. ಕೌರ್ ಈ ಶಾಲೆಯಲ್ಲಿ ಫ್ರಂಚ್ ಮತ್ತು ಪಂಜಾಬಿ ವಿಷಯಗಳನ್ನು ಕಲಿಸುತ್ತಿದ್ದರು.

ಪ್ರತ್ಯಕ್ಷದರ್ಶಿ ಇಂದ್ರಜಿತ್ ಸಿಂಗ್ ಅವರ ಪ್ರಕಾರ ಮುಖಕ್ಕೆ ಶಾಲನ್ನು ಸುತ್ತಿಕೊಂಡಿದ್ದ ವ್ಯಕ್ತಿಯೊಬ್ಬ ಗುರುವಾರ ಬೆಳಿಗ್ಗೆಯಿಂದಲೇ ಶಾಲೆಯ ಸುತ್ತ ಸುತ್ತುತ್ತಿದ್ದ. ಘಟನೆಗೆ ಸಂಬಂಧಿಸಿದಂತೆ ಎಲ್ಲಾ ಆಯಾಮಗಳಲ್ಲಿ ತನಿಖೆಯನ್ನು ನಡೆಸುತ್ತಿರುವುದಾಗಿ ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

Comments are closed.