ಹೈದರಾಬಾದ್: ಸೈಬರಾಬಾದ್ ಎನ್‍ಕೌಂಟರ್ ಮೂಲಕ ಹೈದರಾಬಾದ್ ಪೊಲೀಸರು ಭಾರೀ ಮೆಚ್ಚುಗೆಗೆ ಪಾತ್ರವಾಗಿದ್ದರು. ಅದೇ ರೀತಿ ಇದೀಗ ಎಎಸ್‍ಐ ಮಹಿಳೆಯ ಪ್ರಾಣ ಉಳಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಡುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್ ಕೆ.ಮಾಣಿಕ್ಯಲ ರಾವ್ ಅವರು ನದಿಗೆ ಹಾರಿದ್ದ ಯುವತಿಯನ್ನು ರಕ್ಷಿಸಿದ್ದಾರೆ. ಯುವತಿ ಹಾರಿದ ಸೇತುವೆಯಿಂದಲೇ ಜಿಗುದು ರಕ್ಷಣಾ ಕಾರ್ಯ ನಡೆಸಿದ್ದಾರೆ. ಯುವತಿಯು ಆತ್ಮಹತ್ಯೆ ಮಾಡಿಕೊಳ್ಳಲು ಸೇತುವೆ ಮೇಲಿಂದ ಜಿಗಿದಿದ್ದಳು. ಆಗ 58 ವರ್ಷದ ಎಎಸ್‍ಐ ನದಿಗೆ ಹಾರಿ ಮಹಿಳೆಯನ್ನು ಕಾಪಾಡಿದ್ದಾರೆ.
ಕೆ.ಮಾಣಿಕ್ಯಲ ರಾವ್ ಅವರು ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ಅವನಿಗಡ್ಡ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ನೋ ಆಕ್ಸಿಡೆಂಟ್ ಡೇ’ ನಿಮಿತ್ತ ಮಾಣಿಕ್ಯಲ ಅವರು ಸೇತುವೆ ಬಳಿ ಕಾರ್ಯನಿರ್ವಹಿಸುತ್ತಿದ್ದರು. ಆಗ ಯುವತಿ ಸೇತುವೆ ಮೇಲೆ ನಿಂತಿದ್ದಳು. ಸ್ಥಳೀಯರು ಯುವತಿ ಸೇತುವೆ ಮೇಲೆ ನಿಂತಿರುವುದನ್ನು ಕಂಡು ನದಿಗೆ ಜಿಗಿಯುವ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ. ಆಗ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಣಿಕ್ಯಲ ಹಾಗೂ ಇವರ ಸಹೋದ್ಯೋಗಿ ಗೋಪಿರಾಜು ಸಹ ಅನುಮಾನ ಪಟ್ಟಿದ್ದರು. ಹೀಗಾಗಿ ಸೇತುವೆ ಬಳಿಯೇ ನಿಂತಿದ್ದರು. ಆದರೆ ಪೊಲೀಸರು ಸ್ಥಳಕ್ಕಾಗಮಿಸುವ ಹೊತ್ತಿಗೆ ಯುವತಿಯು ಆಗಲೇ ಸೇತುವೆ ಮೇಲಿಂದ ಜಿಗಿದೇ ಬಿಟ್ಟಿದ್ದಳು.
ಇದನ್ನು ಮಾಣಿಕ್ಯಲ ಅವರು ಗಮನಿಸಿ, ತಕ್ಷಣ ನದಿಗೆ ಹಾರಿದ್ದಾರೆ. ಸುಮಾರು 500 ಮೀಟರ್ ಈಜಿ ನಂತರ ಯುವತಿಯನ್ನು ರಕ್ಷಿಸಿದ್ದಾರೆ. ಆಗ ಗೋಪಿರಾಜು ಅವರು ಮೀನುಗಾರರ ಬಳಿ ತೆರಳಿದ್ದು, ಮೀನುಗಾರರು ಘಟನಾ ಸ್ಥಳಕ್ಕೆ ದೋಣಿಯನ್ನು ತಂದಿದ್ದಾರೆ.
ಕೊನೆಗೂ ಮಾಣಿಕ್ಯಲ ಅವರು ಯುವತಿಯನ್ನು ರಕ್ಷಿಸಿದ್ದು, ನಂತರ ಅವರನ್ನು ಅವನಿಗಡ್ಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಯುವತಿಯ ಸ್ಥಿತಿ ಸಹಜವಾಗಿದೆ. ಘಟನೆ ಕುರಿತು ಮಾಹಿತಿ ತಿಳಿದ ಎಸ್‍ಪಿ ರವೀಂದ್ರನಾಥ ಬಾಬು ಮಾಣಿಕ್ಯಲ ಅವರ ಸಾಹಸವನ್ನು ಹಾಡಿಹೊಗಳಿದ್ದಾರೆ. ಅಲ್ಲದೆ ಯುವತಿ ಯಾಕೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದಳು ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Comments are closed.