ಪಶುವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣ ಹಾಗೂ ಉನ್ನಾವ್ ಸಂತ್ರಸ್ತೆಯ ಸಾವು ದೇಶಾದ್ಯಂತ ಆಕ್ರೋಶ ಮೂಡಿಸಿದ್ದರೂ, ಉತ್ತರಪ್ರದೇಶ ಪೊಲೀಸರು ಮಾತ್ರ ತಮ್ಮ ಉದ್ಧಟತನವನ್ನು ಮುಂದುವರಿಸುವ ಮೂಲಕ ವ್ಯವಸ್ಥೆಯ ಬಗ್ಗೆ ರೇಜಿಗೆ ಹುಟ್ಟಿಸುವಂತೆ ಮಾಡಿದ್ದಾರೆ.
ಉ.ಪ್ರದೇಶದ ಹಿಂದೂಪುರ ಗ್ರಾಮದ ಮಹಿಳೆಯೊಬ್ಬರು ತಮ್ಮ ಮೇಲೆ ಅತ್ಯಾಚಾರ ಯತ್ನ ನಡೆದಿದೆ ಎಂದು ದೂರು ನೀಡಲು ಬಂದಾಗ ದೂರು ಸ್ವೀಕರಿಸಲು ಪೊಲೀಸರು ನಿರಾಕರಿಸಿದ್ದಾರೆ. ಅಷ್ಟೇ ಅಲ್ಲ, ‘ಇನ್ನೂ ನಿನ್ನ ಮೇಲೆ ಅತ್ಯಾಚಾರ ನಡೆದಿಲ್ಲವಲ್ಲ? ಅದು ನಡೆಯಲಿ. ಅನಂತರ ಬಾ’ ಎಂದು ಹೇಳಿ ತಮ್ಮನ್ನು ಠಾಣೆಯಿಂದಲೇ ಹೊರದಬ್ಬಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾಳೆ.
ಜತೆಗೆ, ಅತ್ಯಾಚಾರಕ್ಕೆ ಯತ್ನಿಸಿದ ಮೂವರು ಆರೋಪಿಗಳು, ತನ್ನ ಮನೆ ಮುಂದೆ ಪ್ರತಿ ದಿನ ಬಂದು, ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದೂ ಮಹಿಳೆ ಅಳಲು ತೋಡಿಕೊಂಡಿದ್ದಾರೆ.
2 ತಿಂಗಳಲ್ಲೇ ಕೇಸು ಇತ್ಯರ್ಥ?
ಅತ್ಯಾಚಾರ ಹಾಗೂ ಪೋಕ್ಸೋ ಕಾಯ್ದೆಯಡಿ ದಾಖಲಾದ ಪ್ರಕರಣಗಳ ತನಿಖೆಯನ್ನು 2 ತಿಂಗಳೊಳಗೆ ಪೂರ್ಣ ಗೊಳಿಸುವಂತೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆಯುವುದಾಗಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ಜತೆಗೆ, ಇಂಥ ಪ್ರಕರಣಗಳ ವಿಚಾರಣೆಯೂ 6 ತಿಂಗಳೊಳಗೆ ಮುಗಿಯಬೇಕು ಎಂದು ಮನವಿ ಮಾಡುತ್ತೇನೆ ಎಂದೂ ಅವರು ಹೇಳಿದ್ದಾರೆ.
ಮಹಿಳಾ ದೌರ್ಜನ್ಯದಂಥ ಸಾಮಾಜಿಕ ಪಿಡುಗಿಗೆ ಅಂತ್ಯ ಹಾಡಬೇಕೆಂದರೆ ಕೇವಲ ಕಾನೂನು ಜಾರಿ ಮಾಡಿದರೆ ಸಾಲದು, ಅದಕ್ಕೆ ರಾಜಕೀಯ ಇಚ್ಛಾಶಕ್ತಿ ಮತ್ತು ಆಡಳಿತಾತ್ಮಕ ಕೌಶಲ್ಯ ಅಗತ್ಯ.
– ಎಂ.ವೆಂಕಯ್ಯ ನಾಯ್ಡು, ಉಪರಾಷ್ಟ್ರಪತಿ
Comments are closed.