ದೆಹಲಿ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಉನ್ನಾವೋ ಅಪ್ರಾಪ್ರ ಬಾಲಕಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಉಚ್ಛಾಟಿತ ಬಿಜೆಪಿ ಶಾಸಕ ಕುಲದೀಪ್ ಸೆಂಗಾರ್ ಗೆ ದೆಹಲಿ ಹೈಕೋರ್ಟ್ ಇಂದು ಜೀವಾವಧಿ ಶಿಕ್ಷೆ ನೀಡಿ ಮಹತ್ವದ ತೀರ್ಪಿತ್ತಿದೆ.
ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಪ್ರಕರಣದ ತುರ್ತು ವಿಚಾರಣೆಗೆ ಮುಂದಾಗಿದ್ದ ದೆಹಲಿ ಹೈಕೋರ್ಟ್ ವಾದ-ವಿವಾದ ಹಾಗೂ ಸಾಕ್ಷಿಗಳನ್ನು ಆಲಿಸಿ ಸುದೀರ್ಘ ವಿಚಾರಣೆ ಬಳಿಕ ಕುಲ್ದೀಪ್ ಸಿಂಗ್ ಸೆಂಗಾರ್ ದೋಷಿ ಎಂದು ಕಳೆದ ಸೋಮವಾರವೇ ಘೋಷಿಸಿತ್ತು. ಆದರೆ, ಇಂದು ಶಿಕ್ಷೆಯ ಪ್ರಮಾಣವನ್ನು ಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ.
ಪ್ರಕರಣ….
ಉತ್ತರ ಪ್ರದೇಶದ ಉನ್ನಾವೋ ಯುವತಿ ಮೇಲೆ ಜೂನ್,4 2017ರಲ್ಲಿ ಅತ್ಯಾಚಾರ ನಡೆದಿತ್ತು. ಈ ಪ್ರಕರಣದಲ್ಲಿ ಬಿಜೆಪಿ ಶಾಸಕನಾಗಿದ್ದ ಕುಲದೀಪ್ ಸೆಂಗಾರ್ ಜೊತೆಗೆ ಇನ್ನೂ ನಾಲ್ವರ ಹೆಸರು ಕೇಳಿಬಂದಿತ್ತು. ಆ ಆರೋಪಿಗಳು ಜಾಮೀನಿನ ಮೇಲೆ ಹೊರಬಂದಿದ್ದರು. ಕಳೆದ ವರ್ಷ ಯುವತಿ ಕೊಲೆಗೆ ಯತ್ನ ನಡೆದಿತ್ತು. ವಕೀಲರ ಜತೆ ಕೋರ್ಟ್‌ಗೆ ಹೋಗುತ್ತಿದ್ದಾಗ ಆಕೆಯ ಕಾರ್ಗೆ ಅಪಘಾತ ಮಾಡಿಸಲಾಗಿತ್ತು. ಈ ಅಪಘಾತದಲ್ಲಿ ವಕೀಲ ಮತ್ತು ಆಕೆಯ ಚಿಕ್ಕಪ್ಪ ಮೃತಪಟ್ಟಿದ್ದರು.
2018ರಿಂದಲೂ ಸಿಬಿಐ ಈ ಪ್ರಕರಣದ ತನಿಖೆ ನಡೆಸುತ್ತಿದೆ. ಆದರೆ, ರೇಪ್ ಸಂತ್ರಸ್ತೆಯ ಕುಟುಂಬದವರನ್ನು ನಾಶ ಮಾಡುವ ವ್ಯವಸ್ಥಿತ ಸಂಚು ನಡೆಯುತ್ತಿರುವ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಈ ಪ್ರಕರಣದಲ್ಲಿ ಮಧ್ಯ ಪ್ರವೇಶ ಮಾಡಿತ್ತು. ಸಂತ್ರಸ್ತೆ ಮತ್ತಾಕೆಯ ಕುಟುಂಬ ಸದಸ್ಯರನ್ನು ವಾಯುಮಾರ್ಗದ ಮೂಲಕ ಉತ್ತರ ಪ್ರದೇಶದಿಂದ ಹೊರಗೆ ಕರೆ ತರಬೇಕೆಂದು ಸುಪ್ರೀಂ ಕೋರ್ಟ್ ಹೇಳಿತ್ತು. ಹಾಗೆಯೇ, ಪ್ರಕರಣದ ತನಿಖೆಯನ್ನು ಇನ್ನೊಂದು ವಾರದೊಳಗೆ ಮುಗಿಸಬೇಕೆಂದು ಸಿಬಿಐಗೆ ತಾಕೀತು ಮಾಡಿತ್ತು.
Comments are closed.