ರಾಷ್ಟ್ರೀಯ

ದಿಲ್ಲಿ ಸುತ್ತಮುತ್ತ ಒಂದು ನಿಮಿಷ ಕಂಪಿಸಿ ಲಘು ಭೂಕಂಪ

Pinterest LinkedIn Tumblr


ಹೊಸದಿಲ್ಲಿ: ಉತ್ತರ ಭಾರತದ ಹಲವು ಭಾಗಗಳಲ್ಲಿ ಶುಕ್ರವಾರ ಅಪರಾಹ್ನ ಭೂಮಿ ಕಂಪಿಸಿದ ಅನುಭವವಾಗಿದೆ. ದಿಲ್ಲಿ, ಜಮ್ಮು ಮತ್ತು ಕಾಶ್ಮೀರ ಪ್ರದೇಶದಲ್ಲಿ ಭೂಮಿ ಹೆಚ್ಚಾಗಿ ಕಂಪಿಸಿದೆ. ಸುಮಾರು ಒಂದು ನಿಮಿಷ ಕಾಲ ಭೂಮಿ ಕಂಪಿಸುತ್ತಿತ್ತು ಎಂಬುದಾಗಿ ಸ್ಥಳೀಯರು ತಿಳಿಸಿದ್ದಾರೆ.

ಅಫ್ಘಾನಿಸ್ತಾನದ ಹಿಂದುಖುಷ್‌ ಭಾಗದಲ್ಲಿ ಭೂಕಂಪದ ಕೇಂದ್ರ ಬಿಂದು ಇತ್ತು ಎಂಬುದಾಗಿ ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ರಿಕ್ಟರ್‌ ಮಾಪಕದಲ್ಲಿ ಭೂಕಂಪದ ತೀವ್ರತೆ 6.3 ದಾಖಲಾಗಿದ್ದು, ಸುತ್ತ ಮುತ್ತಲಿನ ಪ್ರದೇಶಗಳಲ್ಲೂ ಲಘುವಾಗಿ ಭೂಮಿ ಕಂಪಿಸಿದೆ.

ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್‌ನಿಂದ ಭೂಕಂಪದ ಕೇಂದ್ರ ಬಿಂದು 246 ಕಿಲೋಮೀಟರ್‌ ದೂರದಲ್ಲಿದ್ದು, 190 ಕಿಲೋಮೀಟರ್‌ ಆಳದಲ್ಲಿತ್ತು ಎಂಬುದಾಗಿ ಇಲಾಖೆ ವಿವರ ನೀಡಿದೆ. ಭಾರತೀಯ ಕಾಲಮಾನ 5 ಗಂಟೆ 9 ನಿಮಿಷಕ್ಕೆ ಭೂಕಂಪ ಸಂಭವಿಸಿದೆ.

ಭೂಕಂಪದಿಂದ ಹೆದರಿದ ಜನರು ದೆಹಲಿ ಪ್ರದೇಶದಲ್ಲಿ ಮನೆ ಮತ್ತು ಕಚೇರಿಯಿಂದ ಹೊರಗೆ ಓಡಿ ಬಂದಿದ್ದಾರೆ. ಹಲವರು ಈ ಸಂಬಂಧ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಸೀಲಿಂಗ್‌ ಫ್ಯಾನ್‌ಗಳು, ಲೈಟ್‌ಗಳು ಅಲ್ಲಾಡುತ್ತಿರುವುದು ಕಂಡು ಬಂದಿದೆ.

ದಿಲ್ಲಿಯ ಸುತ್ತ ಮುತ್ತಲಿನ ಪ್ರದೇಶಗಳಾದ ಗುರುಗ್ರಾಮ, ನೋಯ್ಡಾ ಮತ್ತು ರಾಜಸ್ಥಾನದ ರಾಜಧಾನಿ ಜೈಪುರದಲ್ಲಿಯೂ ಭೂಮಿ ಕಂಪಿಸಿದ ವರದಿಯಾಗಿದೆ.

Comments are closed.