ಹೊಸದಿಲ್ಲಿ: 2017ರಲ್ಲಿ ಅಂದಾಜು ಏಳು ಭಾರತೀಯರಲ್ಲಿ ಒಬ್ಬರು ವಿವಿಧ ತೀವ್ರತೆಯ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಖಿನ್ನತೆ ಮತ್ತು ಆತಂಕ ಎದುರಿಸುತ್ತಿರುವುದು ಸಾಮಾನ್ಯವಾಗಿದೆ ಎಂದು ಅಧ್ಯಯನವೊಂದು ತಿಳಿಸಿದೆ.
ಲ್ಯಾನ್ಸೆಟ್ ಸೈಕಿಯಾಟ್ರಿಯಲ್ಲಿ ಪ್ರಕಟವಾದ ಅಧ್ಯಯನವು ರಾಜ್ಯ ಮಟ್ಟದಲ್ಲಿ ಖಿನ್ನತೆಯ ಹರಡುವಿಕೆ ಮತ್ತು ಆತ್ಮಹತ್ಯೆ- ಸಾವಿನ ಪ್ರಮಾಣಗಳ ನಡುವೆ ಮಹತ್ವದ ಸಂಬಂಧವಿದೆ ಎಂದು ಹೇಳಿದೆ. ಇದು ಮಹಿಳೆಯರಿಗಿಂತ ಪುರುಷರಲ್ಲಿ ಸ್ವಲ್ಪ ಪ್ರಬಲವಾಗಿದೆ. ಮಾನಸಿಕ ಅಸ್ವಸ್ಥತೆ 1990 ಮತ್ತು 2017ರ ನಡುವೆ ದ್ವಿಗುಣಗೊಂಡಿದೆ ಎಂದಿದೆ.
ಭಾರತದಲ್ಲಿನ ಒಟ್ಟು ರೋಗ ಹೊರೆಗೆ ಮಾನಸಿಕ ಅಸ್ವಸ್ಥತೆಗಳ ಕೊಡುಗೆ 1990ರಲ್ಲಿ ಶೇ. 2.5ರಷ್ಟಿದ್ದು, 2017ರಲ್ಲಿ ಶೇ. 4.7ಕ್ಕೆ ಏರಿಕೆಯಾಗಿದೆ. ಖಿನ್ನತೆ ಮತ್ತು ಆತಂಕದ ಕಾಯಿಲೆಗಳು ಸಾಮಾನ್ಯ ಮಾನಸಿಕ ಅಸ್ವಸ್ಥತೆಗಳಾಗಿ ಬದಲಾಗಿವೆ. ಅವುಗಳ ಹರಡುವಿಕೆಯು ಭಾರತದಾದ್ಯಂತ ಹೆಚ್ಚುತ್ತಿದ್ದು, ದಕ್ಷಿಣ ರಾಜ್ಯಗಳಲ್ಲಿ ಮತ್ತು ಮಹಿಳೆಯರಲ್ಲಿ ಹೆಚ್ಚಾಗಿದೆ.
ಖಿನ್ನತೆಯ ಹರಡುವಿಕೆಯು ವಯಸ್ಸಾದರಲ್ಲಿ ಅತಿ ಹೆಚ್ಚು ಕಂಡು ಬರುತ್ತಿದೆ. ಈ ಮಾನಸಿಕ ಅಸ್ವಸ್ಥತೆಗಳು ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಾಗುತ್ತಿದ್ದು, ಪ್ರತಿ ರಾಜ್ಯದಲ್ಲಿ ಮಾನಸಿಕ ಆರೋಗ್ಯಕ್ಕಾಗಿ ಹೆಚ್ಚು ನಿರ್ದಿಷ್ಟವಾದ ಆರೋಗ್ಯ ಸೇವೆಗಳ ಅಗತ್ಯವನ್ನು ಹೇಳಿದೆ.
ರಾಜ್ಯಗಳ ನಡುವಿನ ಪ್ರಮುಖ ವ್ಯತ್ಯಾಸಗಳನ್ನು ಈ ವರದಿ ಎತ್ತಿ ತೋರಿಸಿದೆ. ವಯಸ್ಕ ಮಾನಸಿಕ ಅಸ್ವಸ್ಥತೆಗಳ ಹರಡುವಿಕೆಯು ದಕ್ಷಿಣ ರಾಜ್ಯಗಳಲ್ಲಿ ಹೆಚ್ಚಾಗಿದ್ದರೆ, ಬಾಲ್ಯದ ಮಾನಸಿಕ ಅಸ್ವಸ್ಥತೆಗಳು ಉತ್ತರ ರಾಜ್ಯಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ.
Comments are closed.