ಕಡಪ: ಕೇಂದ್ರ ಸರ್ಕಾರ ಪ್ರಸ್ತಾವಿತ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಆರ್ ಸಿ) ಬಗ್ಗೆ ದೇಶಾದ್ಯಂತ ಪ್ರತಿಭಟನೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಆಂಧ್ರ ಪ್ರದೇಶದಲ್ಲಿ ಇದು ಜಾರಿಯಾಗಲ್ಲ ಎಂದು ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಹೇಳಿದ್ದಾರೆ.
ಮೂರು ದಿನಗಳ ಕಡಪ ಜಿಲ್ಲಾ ಪ್ರವಾಸದಲ್ಲಿರುವ ಜಗನ್ ಮೋಹನ್ ರೆಡ್ಡಿ, ಆರ್ ಐಎಂಎಸ್ ಆಸ್ಪತ್ರೆಯಲ್ಲಿ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿ, ನೆರೆದಿದ್ದ ಬೃಹತ್ ಮುಸ್ಲಿಂ ಸಮುದಾಯವನ್ನುದ್ದೇಶಿಸಿ ಮಾತನಾಡಿದ ಅವರು, ಎನ್ ಆರ್ ಸಿ ಬೆಂಬಲಿಸುವ ಪ್ರಶ್ನೆಯೇ ಇಲ್ಲ ಎಂದರು.
ಕಡಪಕ್ಕೆ ಬಂದ ನಂತರ ಎನ್ ಆರ್ ಸಿ ಬಗ್ಗೆ ಹೇಳಿಕೆ ನೀಡುವಂತೆ ಮುಸ್ಲಿಂ ಮುಖಂಡರು ಮನವಿ ಮಾಡಿದ್ದಾರೆ. ಕಡಪ ವಿಧಾನಸಭಾ ಕ್ಷೇತ್ರ ಪ್ರತಿನಿಧಿಸುವ ಉಪ ಮುಖ್ಯಮಂತ್ರಿ ಅಜ್ಮತ್ ಬಾಷಾ ಶೇಕ್ ಬೆಪಾರಿ ಈಗಾಗಲೇ ಸ್ಪಷ್ಟಪಡಿಸಿದ್ದು, ಸರ್ಕಾರ ಎನ್ ಆರ್ ಸಿಯನ್ನು ಬೆಂಬಲಿಸುವುದಿಲ್ಲ. ಈ ಹೇಳಿಕೆ ನೀಡುವ ಮುನ್ನ ಅವರು ನನ್ನೊಂದಿಗೆ ಚರ್ಚೆ ನಡೆಸಿದ್ದು, ಅವರ ಹೇಳಿಕೆಯನ್ನು ನಾನು ಅನುಮೋದಿಸಿದ್ದೇನೆ ಎಂದರು.
ಎನ್ ಆರ್ ಸಿಗೆ ನಾವು ವಿರೋಧವಾಗಿದ್ದು, ಇದಕ್ಕೆ ಬದ್ಧವಾಗಿದ್ದೇವೆ. ಅದನ್ನು ಸರ್ಕಾರ ಬೆಂಬಲಿಸುವ ಯಾವುದೇ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.
ಪಶ್ಚಿಮ ಬಂಗಾಳ, ಕೇರಳ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್ ಆರ್ ಸಿ ಬಗ್ಗೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೆ ಜಗನ್ ಮೋಹನ್ ರೆಡ್ಡಿ ಈ ಹೇಳಿಕೆ ನೀಡಿದ್ದಾರೆ.
ಲೋಕಸಭೆಯಲ್ಲಿ 22 ಹಾಗೂ ರಾಜ್ಯಸಭೆಯಲ್ಲಿ ಇಬ್ಬರು ಸಂಸದರನ್ನು ಹೊಂದಿರುವ ವೈಎಸ್ ಆರ್ ಕಾಂಗ್ರೆಸ್ ಪೌರತ್ವ ತಿದ್ದುಪಡಿ ಕಾಯ್ದೆ ಮೇಲಿನ ಮತದಾನದ ಸಂದರ್ಭದಲ್ಲಿ ಸರ್ಕಾರವನ್ನು ಬೆಂಬಲಿಸಿತ್ತು.
Comments are closed.