ಪುದುಚೆರಿ: ಹಿಜಾಬ್ ಧರಿಸಿದ್ದರು ಎಂಬ ಕಾರಣಕ್ಕೆ ಮುಸ್ಲಿಂ ವಿದ್ಯಾರ್ಥಿನಿಯನ್ನು ಘಟಿಕೋತ್ಸವ ಸಮಾರಂಭದಿಂದ ಹೊರಗೆ ಕಳುಹಿಸಿದ ಘಟನೆ ಪುದುಚೆರಿ ವಿಶ್ವವಿದ್ಯಾಲಯದಲ್ಲಿ ನಡೆದಿದೆ.
ನಿನ್ನೆ ಪುದುಚೆರಿ ವಿಶ್ವವಿದ್ಯಾಲಯ ಘಟಿಕೋತ್ಸವ ಸಮಾರಂಭ ನಡೆದಿದ್ದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಗವಹಿಸಿದ್ದರು. ಅದರಲ್ಲಿ ಚಿನ್ನದ ಪದಕ ಗಳಿಸಿದ 10 ಮಂದಿ ವಿದ್ಯಾರ್ಥಿಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿ ರಬೀಹಾ ಅಬ್ದುರೆಹಿಮ್ ಕೂಡ ಇದ್ದರು. ಘಟಿಕೋತ್ಸವದಲ್ಲಿ ರಾಷ್ಟ್ರಪತಿಗಳಿಂದ ಚಿನ್ನದ ಪದಕ ಸ್ವೀಕರಿಸಲು ಖುಷಿಯಿಂದ ಕುಳಿತಿದ್ದ ರಬೀಹಾರನ್ನು ಮಹಿಳಾ ಪೊಲೀಸ್ ಅಧಿಕಾರಿ ಏಕಾಏಕಿ ಹೊರಗೆ ಕರೆದರು.
ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಭಾರೀ ಪ್ರತಿಭಟನೆ ನಡೆಯುತ್ತಿರುವ ಸಂದರ್ಭದಲ್ಲಿ ಈ ರೀತಿಯ ಘಟನೆ ನಡೆದಿರುವುದು ವಿದ್ಯಾರ್ಥಿ ಸಮುದಾಯವನ್ನು ಆಕ್ರೋಶಕ್ಕೀಡು ಮಾಡಿದೆ. ಪೊಲೀಸರು ಹೇಳುವ ಪ್ರಕಾರ ಈ ವಿದ್ಯಾರ್ಥಿನಿ ಕಳೆದ ವಾರ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಮಾನವ ಸರಪಳಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ರಬೀಹಾ ಅಬ್ದುರೆಹಿಮ್ ಸಂವಹನ ಸ್ನಾತಕೋತ್ತರ ವಿಭಾಗದಲ್ಲಿ ವಿಶ್ವವಿದ್ಯಾಲಯಕ್ಕೆ ಮೊದಲ ಸ್ಥಾನ ಗಳಿಸಿದ್ದರು. ಹೀಗಾಗಿ ಚಿನ್ನದ ಪದಕಕ್ಕೆ ಪುರಸ್ಕೃತರಾಗಿದ್ದರು.
ಘಟನೆ ಬಗ್ಗೆ ವಿವರಿಸಿದ ರಬೀಹಾ, ”ಜವಹರಲಾಲ್ ನೆಹರೂ ಸಭಾಂಗಣದಲ್ಲಿ ಏರ್ಪಾಡಾಗಿದ್ದ ಘಟಿಕೋತ್ಸವ ಸಮಾರಂಭದಲ್ಲಿ ಇತರ 9 ಮಂದಿ ವಿದ್ಯಾರ್ಥಿಗಳ ಜೊತೆ ಚಿನ್ನದ ಪದಕ ಗಳಿಸಲು ನಾನೂ ಕುಳಿತಿದ್ದೆ. ಆಗ ಅಲ್ಲಿಗೆ ಬಂದ ಮಹಿಳಾ ಹಿರಿಯ ಎಸ್ಪಿ ತಮ್ಮ ಜೊತೆ ಬನ್ನಿ ಎಂದು ಹೊರಗೆ ಕರೆದುಕೊಂಡು ಹೋದರು. ಹೊರಗೆ ಹೋದಾಗ ಯಾಕೆ ಹಿಜಾಬ್ ಧರಿಸಿದ್ದೀರಿ ಎಂದು ಕೇಳಿದರು. ನಾನು ಹೀಗೆ ಧರಿಸಿಕೊಳ್ಳುತ್ತೇನೆ ಎಂದಾಗ ಕಾರ್ಯಕ್ರಮದಲ್ಲಿ ಭಾಗವಹಿಸಬೇಡಿ, ಹೊರಗೆ ಕುಳಿತುಕೊಳ್ಳಬೇಡಿ ಎಂದರು” ಎಂದು ಹೇಳುತ್ತಾರೆ.
ಎಸ್ ಎಸ್ಪಿ ಅಕಾಂಕ್ಷ ಯಾದವ್ ಕೊಠಡಿಗೆ ಹೋಗಿ ಬಾಗಿಲು ಹಾಕಿದವರು ನಂತರ ಹೊರಗೆ ಬರಲಿಲ್ಲ. ಕಾರ್ಯಕ್ರಮ ಆರಂಭವಾದಾಗ ಹೊರಗೆ ನಿಂತಿದ್ದ ಪೊಲೀಸರಲ್ಲಿ ನನ್ನನ್ನು ಯಾಕೆ ಬಿಡುತ್ತಿಲ್ಲ ಎಂದು ಕೇಳಿದೆ. ಆದರೆ ಅವರು ಏನೂ ಹೇಳಲಿಲ್ಲ. ನಂತರ ಪೊಲೀಸ್ ಅಧಿಕಾರಿಗಳೂ ನನ್ನ ಬಳಿ ಬರಲಿಲ್ಲ. ತುಂಬಿದ ಸಭಾಂಗಣದಲ್ಲಿ ಎಲ್ಲರ ಮುಂದೆ ಚಿನ್ನದ ಪದಕ ಪಡೆಯುವುದು ನನ್ನ ಕನಸಾಗಿತ್ತು. ಆದರೆ ಅವರು ನನ್ನ ಮೇಲೆ ತಾರತಮ್ಯ ತೋರಿ ನನ್ನನ್ನು ಘಟಿಕೋತ್ಸವದಲ್ಲಿ ಭಾಗವಹಿಸದಂತೆ ಮಾಡಿದ್ದಾರೆ. ನನಗೆ ಇನ್ನು ಆ ಚಿನ್ನದ ಪದಕ ಬೇಡ, ಎಂದು ತಿರಸ್ಕರಿಸಿದ್ದಾರೆ ರಬೀಹಾ.
Comments are closed.