ಹೈದರಾಬಾದ್: ಉತ್ತರ ಪ್ರದೇಶ ಮೂಲದ ಥಾನೇದಾರ್ ಸಿಂಗ್ ಕುಶ್ವಾಹ ಯಾವುದೇ ಖಾಸಗಿ ಕಂಪನಿಯಲ್ಲಿ ಲಕ್ಷಗಟ್ಟಲೆ ಪಗಾರ ಎಣಿಸುವ ಕೆಲಸದಲ್ಲೇನೂ ಇಲ್ಲ. ಆದರೂ 33 ವರ್ಷದ ಇವನ ವಾಸ ಹೈದರಾಬಾದ್‌ನ ಪ್ರತಿಷ್ಠಿತ ಚಾಂದ್‌ನಗರ ಪ್ರದೇಶದಲ್ಲಿ ತಿಂಗಳಿಗೆ 30 ಸಾವಿರ ರೂ. ಬಾಡಿಗೆ ತೆರುವ ಅಪಾರ್ಟ್‌ಮೆಂಟ್‌ನಲ್ಲಿ. ಮಕ್ಕಳಿಬ್ಬರ ವಾರ್ಷಿಕ ಶಾಲಾ ಶುಲ್ಕ ಬರೋಬ್ಬರಿ 4 ಲಕ್ಷ ರೂ. ಕೆಲಸವಿಲ್ಲದೇ ಇಷ್ಟೆಲ್ಲ ವೆಚ್ಚಕ್ಕೆ ಇವನ ಸಂಪಾದನೆ ಮೂಲ ಬೇರೇನೂ ಅಲ್ಲ, ಅದುವೇ ಪಿಕ್‌ಪಾಕೆಟ್! ಇಂತಹ ಐನಾತಿ ಕಳ್ಳ ಈಗ ಹೈದರಾಬಾದ್ ಪೊಲೀಸರ ಅತಿಥಿ.
ಪೊಲೀಸ್ ಅಧಿಕಾರಿಗಳ ಪ್ರಕಾರ 2004ರಿಂದಲೂ ಕುಶ್ವಾಹನಿಗೆ ಇದುವೇ ಪ್ರಮುಖ ದಂಧೆ. ದೂರ ಸಂಚಾರದ ರೈಲುಗಳನ್ನು ಆಯ್ಕೆ ಮಾಡಿಕೊಂಡು ಒಂದೇ ಒಂದು ಶೇವಿಂಗ್ ಬ್ಲೇಡ್ ಬಳಸಿ ಒಂಚೂರೂ ಅನುಮಾನ ಬರದಂತೆ ಜೇಬಿನಲ್ಲಿದ್ದ ಪರ್ಸ್‌ಗಳನ್ನು ಎಗರಿಸುತ್ತಿದ್ದ. ಇದುವರೆಗೂ 400ಕ್ಕೂ ಹೆಚ್ಚು ಕೃತ್ಯಗಳಲ್ಲಿ ಭಾಗಿಯಾಗಿರುವ ಕುಶ್ವಾಹ ಇದುವರೆಗೂ ಬರೋಬ್ಬರಿ 2 ಕೋಟಿ ರೂ. ನಗದು ಹಾಗೂ ಚಿನ್ನಾಭರಣಗಳನ್ನು ಲಪಟಾಯಿಸಿದ್ದಾನೆಂದು ಸಿಕಂದರಾಬಾದ್ ರೈಲ್ವೆ ಪೊಲೀಸ್ ವರಿಷ್ಠಾಧಿಕಾರಿ ಬಿ. ಅನುರಾಧಾ ಹೇಳಿದ್ದಾರೆ. ಪಿಕ್‌ಪಾಕೆಟ್ ಅಷ್ಟೇ ಅಲ್ಲದೇ ಸಟ್ಟಾ ಬಾಜಿ ಮಾರುಕಟ್ಟೆ ಯಲ್ಲಿಹಾಗೂ ಕ್ರಿಕೆಟ್ ಬೆಟ್ಟಿಂಗ್‌ನಲ್ಲೂ ಹಣ ಹೂಡಿಕೆ ಮಾಡುತ್ತಿದ್ದ. ಪೊಲೀಸರು ಈತನಿಂದ 13 ಲಕ್ಷ ರೂ. ನಗದು ಹಾಗೂ 27 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಒಂದು ಟ್ರಿಪ್ 20 ಸಾವಿರ ರೂ.: ಲಾಂಗ್ ಡಿಸ್ಟೆನ್ಸ್ ರೈಲುಗಳನ್ನು ಪಿಕ್‌ಪಾಕೆಟ್‌ಗೆ ಆಯ್ಕೆ ಮಾಡಿಕೊಳ್ಳುತ್ತಿದ್ದ ಕುಶ್ವಾಹ ಒಂದು ಟ್ರಿಪ್‌ಗೆ ಸರಿಸುಮಾರು 20 ಸಾವಿರ ರೂ.ದಷ್ಟು ನಗದು ಹಾಗೂ ಚಿನ್ನಾಭರಣ ಕದಿಯುವ ಟಾರ್ಗೆಟ್ ಹಾಕಿಕೊಳ್ಳುತ್ತಿದ್ದ! ಎಲ್ಲವೂ ಮೊದಲೇ ಲೆಕ್ಕಹಾಕಿಕೊಂಡು ನಿರ್ದಿಷ್ಟ ದೂರದವರೆಗೆ ಕಾಯ್ದಿರಿಸಿದ ಟಿಕೆಟ್ ಖರೀದಿಸಿ ಇಲ್ಲವೇ ಜನರಲ್ ಬೋಗಿಗಳಲ್ಲಿ ಸಂಚರಿಸಿ ಪ್ರಯಾಣಿಕರ ಪರ್ಸ್ ಅಥವಾ ಚಿನ್ನಾಭರಣಗಳನ್ನು ಬಲು ನಾಜೂಕಾಗಿ ಎಗರಿಸುತ್ತಿದ್ದ. ಸರಾಸರಿ ತಿಂಗಳಿಗೆ 8 ಬಾರಿ ಇಂತಹ ಟ್ರಿಪ್‌ಗಳನ್ನು ಕೈಗೊಳ್ಳುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಯೆರವಾಡ ಜೈಲಿನಲ್ಲಿದ್ದ: ಉತ್ತರ ಪ್ರದೇಶದ ಅಲಿಗಢ ಮೂಲದ ಕುಶ್ವಾಹ ಈ ಹಿಂದೆ ಹೈದರಾಬಾದ್‌ನ ಬಂಜಾರ ಹಿಲ್ಸ್ ಪೊಲೀಸರಿಂದ 2007 ಹಾಗೂ 2011ರಲ್ಲಿ ಬಂಧನಕ್ಕೊಳಗಾಗಿದ್ದ. ಪ್ರಕರಣವೊಂದರಲ್ಲಿ ಬಂಧನವಾಗಿದ್ದ ಈತ ಒಂದಷ್ಟು ದಿನ 2008ರ ಮುಂಬಯಿ ದಾಳಿಯಲ್ಲಿ ಸೆರೆಸಿಕ್ಕು ನೇಣುಗಂಬ ಏರಿದ ಉಗ್ರ ಅಜ್ಮಲ್ ಕಸಬ್ ಇದ್ದ ಪುಣೆಯ ಯೆರವಾಡ ಜೈಲಿನಲ್ಲೂ ಶಿಕ್ಷೆ ಅನುಭವಿಸಿದ್ದ. ಬಿಡುಗಡೆಗೊಂಡ ಬಳಿಕ ಮತ್ತದೇ ಕೃತ್ಯ ಮುಂದುವರಿಸಿದ್ದ.
Comments are closed.