ಫಿರೋಜಾಬಾದ್: ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಅಲ್ಪ ಸಂಖ್ಯಾತರ ಪ್ರತಿಭಟನೆ ಜೋರಾಗಿರುವಂತೆಯೇ ಇತ್ತ ಆಕ್ರೋಶಿತ ಪ್ರತಿಭಟನಾಕಾರರಿಂದ ಮುಸ್ಲಿಂ ವ್ಯಕ್ತಿಯೊಬ್ಬ ಪೊಲೀಸ್ ಅಧಿಕಾರಿಯನ್ನು ರಕ್ಷಣೆ ಮಾಡುವ ಮೂಲಕ ಹೀರೋ ಆಗಿದ್ದಾರೆ.
ಉತ್ತರ ಪ್ರದೇಶದಲ್ಲಿ ಕಳೆದ ವಾರ ನಡೆದಿದ್ದ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತ್ತು. ಈ ವೇಳೆ ಹಿಂಸಾತ್ಮಕ ಗಲಭೆಯಲ್ಲಿ ಸಿಕ್ಕಿ ಹಾಕಿಕೊಂಡು ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬರನ್ನು ಮುಸ್ಲಿಂ ವ್ಯಕ್ತಿಯೊಬ್ಬರು ರಕ್ಷಿಸುವ ಮೂಲಕ ಶೌರ್ಯ ಮತ್ತು ಮಾನವೀಯತೆ ಮೆರೆದಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಡಿಸೆಂಬರ್ 20 ರಂದು ಉತ್ತರ ಪ್ರದೇಶದ ಫಿರೋಜಾಬಾದ್ ನಲ್ಲಿ ಪ್ರತಿಭಟನೆ ನಡೆಯುತ್ತಿತ್ತು. ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದು ಕೊನೆಗೆ ಪ್ರತಿಭಟನಾ ಹಿಂಸಾಚಾರಕ್ಕೆ ತಿರುಗಿತ್ತು. ಪೊಲೀಸರು ಲಾಠಿ ಚಾರ್ಜ್ ಮಾಡುತ್ತಿದ್ದಂತೆ ಉದ್ರಿಕ್ತರು ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾದರು. ಈ ವೇಳೆ ಅಲ್ಲಿಯೇ ಭದ್ರತೆಗೆ ನಿಯೋಜನೆಯಾಗಿದ್ದ ಅಜಯ್ ಕುಮಾರ್ ಎಂಬ ಪೊಲೀಸ್ ಅಧಿಕಾರಿ ಪ್ರತಿಭಟನಾಕಾರರಿಗೆ ಸಿಕ್ಕಿ ಹಾಕಿಕೊಂಡಿದ್ದರು.
ಉದ್ರಿಕ್ತರು ಅವರ ಮೇಲೆ ಹಲ್ಲೆ ಮಾಡಿ ಮನಸೋ ಇಚ್ಛೆ ಥಳಿಸುತ್ತಿದ್ದರು. ಈ ವೇಳೆ ಗಮನಿಸಿದ ಹಜ್ಜಿ ಖಾದಿರ್ ಎಂಬ ಮುಸ್ಲಿಂ ವ್ಯಕ್ತಿ ಅವರ ರಕ್ಷಣೆಗೆ ಮುಂದಾದರು. ಅಜಯ್ ಕುಮಾರ್ ಅವರನ್ನು ಜನಸಮೂಹದಿಂದ ಬೇರ್ಪಡಿಸಿ, ಅವರ ಮನೆಗೆ ಕರೆದೊಯ್ದರು. ಪರಿಸ್ಥಿತಿ ನಿಯಂತ್ರಣಕ್ಕೆ ತಂದ ನಂತರ ಅವರನ್ನು ಪೊಲೀಸ್ ಠಾಣೆಗೆ ಕಳುಹಿಸಿ ಕೊಟ್ಟರು. ಆ ಮೂಲಕ ಉದ್ರಿಕ್ತರಿಂದ ಅಜಯ್ ಕುಮಾರ್ ಅವರನ್ನು ಹಜ್ಜಿ ಖಾದಿರ್ ರಕ್ಷಣೆ ಮಾಡಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಗಾಯಾಳು ಪೊಲೀಸ್ ಅಧಿಕಾರಿ ಅಜಯ್ ಕುಮಾರ್, ನನ್ನ ಪಾಲಿಗೆ ಖಾದಿರ್ ಅವರೇ ದೇವಧೂತ. ಅವರಿಲ್ಲದೇ ಹೋಗಿದ್ದರೆ ನಾನು ಇಂದು ಜೀವಂತ ಇರುತ್ತಿರಲಿಲ್ಲ. ನಾನು ಉದ್ರಿಕ್ತರ ನಡುವೆ ಸಿಲುಕೊಂಡಿದ್ದೆ. ಹಲ್ಲೆಯಿಂದ ನನ್ನ ತಲೆ ಮತ್ತು ಕೈಬೆರಳಿಗೆ ಗಾಯವಾಗಿತ್ತು. ಆಗ ಹಜ್ಜಿ ಖಾದಿರ್ ಸಾಹೆಬ್ ನನ್ನನ್ನು ಅಲ್ಲಿಂದ ಬಿಡಿಸಿಕೊಂಡು ಅವರ ಮನೆಗೆ ಕರೆದೊಯ್ದರು. ಅವರು ನನಗೆ ಕುಡಿಯಲು ನೀರು ಕೊಟ್ಟು ಬೇರೆ ಬಟ್ಟೆಗಳನ್ನು ನೀಡಿದರು. ನೀವು ಸುರಕ್ಷಿತವಾಗಿದ್ದೀರಿ ಚಿಂತಿಸಬೇಡಿ ಎಂದು ಭರವಸೆ ನೀಡಿದರು. ನಂತರ ನನ್ನನ್ನು ಪೊಲೀಸ್ ಠಾಣೆಗೆ ಕರೆದೊಯ್ದರು ಎಂದು ತಮ್ಮ ಕರಾಳ ಅನುಭವವನ್ನು ಬಿಚಿಟ್ಟಿದ್ದಾರೆ.
ಇದೇ ವಿಚಾರವಾಗಿ ಮಾತನಾಡಿರು ಹಜ್ಜಿ ಖಾದಿರ್, ‘ಅಂದು ಪೋಲಿಸ್ ಒಬ್ಬನನ್ನು ಜನಸಮೂಹವು ಸುತ್ತುವರೆದಿದೆ ಎಂದು ತಿಳಿದಾಗ ತಾನು ನಮಾಜ್ ಮುಗಿಸಿ ಬರುತ್ತಿದ್ದೆ. ಅಜಯ್ ಕುಮಾರ್ ತೀವ್ರವಾಗಿ ಗಾಯಗೊಂಡಿದ್ದರು. ಕೂಡಲೇ ನಾನು ಓಡಿಹೋಗಿ ಅವರನ್ನು ಬಿಡಿಸಿದೆ. ನಾನು ಅವರನ್ನು ಉಳಿಸುತ್ತೇನೆ ಎಂದು ಭರವಸೆ ನೀಡಿದ್ದೆ. ಆ ಸಮಯದಲ್ಲಿ ಅವರ ಹೆಸರು ಸಹ ನನಗೆ ತಿಳಿದಿರಲಿಲ್ಲ. ನಾನು ಮಾಡಿದ್ದು ಮಾನವೀಯತೆಗಾಗಿ. ಸಮಾಜದ ಓರ್ವ ನಾಗರಿಕನಾಗಿ ಅದು ನನ್ನ ಕರ್ತವ್ಯ ಕೂಡ ಆಗಿತ್ತು ಎಂದು ಹೇಳಿದ್ದಾರೆ. ಇನ್ನು ಹಜ್ಜಿ ಖಾದಿರ್‌ರವರ ಈ ಸಹಾಯಕ್ಕೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ.
Comments are closed.