ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತೀವ್ರ ಚಳಿಯ ನಡುವೆಯೂ ಶುಕ್ರವಾರ ಜಮಾ ಮಸೀದಿ ಬಳಿ ಸಾವಿರಾರು ಜನ ಸೇರಿ ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ನಾಯಕಿ ಅಲ್ಕಾ ಲಂಬಾ ಮತ್ತು ದೆಹಲಿ ಮಾಜಿ ಶಾಸಕ ಸೋಯಿಬ್ ಇಖ್ಬಾಲ್ ಸೇರಿದಂತೆ ಹಲವು ಧರಣಿಯಲ್ಲಿ ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ಅಲ್ಕಾ ಲಾಂಬಾ ಅವರು, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ದೇಶದಲ್ಲಿ ನಿರುದ್ಯೋಗ ನಿಜವಾದ ಸಮಸ್ಯೆಯಾಗಿದ್ದು, ಪ್ರಧಾನಿ ಮೋದಿ ಈ ಬಗ್ಗೆ ಗಮನಹರಿಸುವ ಬದಲು ಎನ್ ಆರ್ ಸಿಗಾಗಿ ಜನರನ್ನು ಕ್ಯೂನಲ್ಲಿ ನಿಲ್ಲುವಂತೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮತ್ತೊಂದು ಕಡೆ ಭೀಮ್ ಆರ್ಮಿ ಕಾರ್ಯಕರ್ತರು ಎನ್ ಆರ್ ಸಿ ವಿರೋಧಿಸಿ ಹಾಗೂ ಬಂಧಿತ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಪ್ರಧಾನಿ ಮೋದಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು.
ಪ್ರಧಾನಿ ಮೋದಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ತೆರಳುತ್ತಿದ್ದ ಭೀಮ್ ಆರ್ಮಿ ಕಾರ್ಯಕರ್ತರನ್ನು ಪೊಲೀಸರು ಲೋಕ ಕಲ್ಯಾಣ್ ಮಾರ್ಗ್ ದಲ್ಲಿಯೇ ತಡೆದಿದ್ದಾರೆ.
Comments are closed.