ರಾಷ್ಟ್ರೀಯ

ಸಾವರ್ಕರ್‌, ಗೋಡ್ಸೆ ಮಧ್ಯೆ ಸಲಿಂಗಕಾಮ: ಕಾಂಗ್ರೆಸ್‌ ಸೇವಾದಳದ ಪುಸ್ತಕ

Pinterest LinkedIn Tumblr


ಮುಂಬಯಿ/ಹೊಸದಿಲ್ಲಿ: ವೀರ್‌ ಸಾವರ್ಕರ್‌ ಮತ್ತು ಗಾಂಧಿ ಹಂತಕ ನಾಥೂರಾಮ್‌ ಗೋಡ್ಸೆ ನಡುವೆ ‘ಸಲಿಂಗ ಕಾಮ’ದ ಸಂಬಂಧವಿತ್ತು ಎಂದು ಆರೋಪ ಹೊರಿಸುವ ಮೂಲಕ ಕಾಂಗ್ರೆಸ್‌ ಹೊಸ ವಿವಾದ ಸೃಷ್ಟಿಸಿದೆ. ”ವೀರ್‌ ಸಾವರ್ಕರ್‌ ಮತ್ತು ನಾಥೂರಾಮ್‌ ಗೋಡ್ಸೆ ಸಲಿಂಗಿಗಳಾಗಿದ್ದು, ಅವರ ನಡುವೆ ದೈಹಿಕ ಸಂಬಂಧ ಇತ್ತು” ಎಂದು ಕಾಂಗ್ರೆಸ್‌ನ ಸೇವಾ ದಳ ಪ್ರಕಟಿಸಿರುವ ಪುಸ್ತಕದಲ್ಲಿ ಆರೋಪಿಸಿದ್ದು ಈಗ ತೀವ್ರ ವಿವಾದಕ್ಕೆ ಕಾರಣವಾಗಿದೆ.

”ಮಹಾತ್ಮ ಗಾಂಧಿ ಹತ್ಯೆ ಪ್ರಕರಣದಲ್ಲಿ ಸಾವರ್ಕರ್‌ ಮತ್ತು ಗೋಡ್ಸೆ ಇಬ್ಬರ ವಿರುದ್ಧವೂ ಆರೋಪ ಕೇಳಿ ಬಂದಿತ್ತು. ಪರಸ್ಪರ ಚರ್ಚಿಸಿಯೇ ಹತ್ಯೆ ಸಂಚು ರೂಪಿಸಿದ್ದರು ಎನ್ನುವ ವಾದಗಳು ಇದ್ದವು. ಈ ಪ್ರಕರಣದಲ್ಲಿನೇರ ಭಾಗಿಯಾಗಿದ್ದ ಗೋಡ್ಸೆ ಗಲ್ಲುಗಂಬಕ್ಕೇರಿದ್ದರು. ಸಾವರ್ಕರ್‌ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಲಭಿಸದೇ ದೋಷಮುಕ್ತಗೊಂಡಿದ್ದರು. ಈ ಇಬ್ಬರು ಬಲಪಂಥೀಯ ಚಿಂತಕರ ನಡುವೆ ಅತಿಯಾದ ಸಲುಗೆ ಇತ್ತು. ಸಲಿಂಗ ಕಾಮಕೇಳಿಯ ವಿಷಯದಲ್ಲಿ ಪರಸ್ಪರ ಆಸಕ್ತಿ ಹೊಂದಿದ್ದರು. ದೈಹಿಕ ಸಂಬಂಧ ಕೂಡ ಇಟ್ಟುಕೊಂಡಿದ್ದರು” ಎಂದು ‘ವೀರ್‌ ಸಾವರ್ಕರ್‌, ಕಿತ್ನೆ ವೀರ್‌?’ ಹೆಸರಿನ ಪುಸ್ತಕದಲ್ಲಿ ಸೇವಾ ದಳ ಗಂಭೀರ ಆರೋಪ ಮಾಡಿದೆ.

ಬಿಜೆಪಿ, ಶಿವಸೇನೆ ಕಿಡಿ

ದೇಶಕ್ಕಾಗಿ ಹೋರಾಡಿದ ವೀರ್‌ ಸಾವರ್ಕರ್‌ ವಿಷಯದಲ್ಲಿ ಇಂತಹ ಕೊಳಕು ಆರೋಪ ಮಾಡಿರುವ ಕಾಂಗ್ರೆಸ್‌ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.

”ಕಾಂಗ್ರೆಸ್‌ ಹೊರ ತಂದಿರುವ ಪುಸ್ತಕ ಹಸಿಸುಳ್ಳುಗಳನ್ನು ಒಳಗೊಂಡಿದೆ. ಕೀಳು ಅಭಿರುಚಿಯನ್ನು ಪ್ರತಿಪಾದಿಸುತ್ತದೆ. ಇನ್ನೊಬ್ಬರ ಖಾಸಗಿ ವಿಷಯದಲ್ಲಿ ಇಂತಹ ಕೊಳಕು ಹುಡುಕುವ ಕಾಂಗ್ರೆಸ್‌ ಮುಖಂಡರು ಸಾಚಾಗಳಾಗಿದ್ದಾರೆಯೇ? ಅನೇಕ ಕೈ ನಾಯಕರ ‘ಖಾಸಗಿ ಬದುಕು’ ಎಂಥದ್ದು ಎನ್ನುವುದು ಇಡೀ ಜಗತ್ತಿಗೆ ಗೊತ್ತಿದೆ” ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಿಲ್‌ ಜೈನ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಷಯದಲ್ಲಿ ಮಿತ್ರಪಕ್ಷ ಶಿವಸೇನೆ ಕೂಡ ಕಾಂಗ್ರೆಸ್‌ ವಿರುದ್ಧ ಕಿಡಿ ಕಾರಿದೆ. ”ವೀರ್‌ ಸಾವರ್ಕರ್‌ ಶ್ರೇಷ್ಠ ನಾಯಕರಾಗಿದ್ದರು. ಮುಂದೆಯೂ ಶ್ರೇಷ್ಠ ನಾಯಕರಾಗಿಯೇ ಉಳಿಯುತ್ತಾರೆ. ಅವರ ಬಗ್ಗೆ ಕೆಲವರು ಲಘುವಾಗಿ ಮಾತಾಡುತ್ತಿದ್ದಾರೆ. ಅದು ಅವರ ಕೊಳಕು ಮನಸ್ಥಿತಿಯನ್ನು ತೋರಿಸುತ್ತದೆ ಅಷ್ಟೇ” ಎಂದು ಶಿವಸೇನೆ ವಕ್ತಾರ ಸಂಜಯ್‌ ರಾವತ್‌ ಟೀಕಿಸಿದ್ದಾರೆ.

Comments are closed.