ನವದೆಹಲಿ: ನಿರ್ಭಯಾ ಗ್ಯಾಂಗ್ ರೇಪ್ ಮತ್ತು ಕೊಲೆ ಪ್ರಕರಣದ ಅಪರಾಧಿಗಳಲ್ಲಿ ಒಬ್ಬನಾದ ಮುಕೇಶ್ ರಾಷ್ಟ್ರಪತಿಗೆ ಕ್ಷಮಾದಾನ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಜ.22ರ ಬೆಳಗ್ಗೆ ನಾಲ್ವರನ್ನು ಗಲ್ಲಿಗೇರಿಸದಂತೆ ದಿಲ್ಲಿ ಕೋರ್ಟ್ ಗುರುವಾರ ತಡೆ ನೀಡಿರುವುದಾಗಿ ವರದಿ ತಿಳಿಸಿದೆ.
ದಿಲ್ಲಿಯ ತೀಸ್ ಹಜಾರಿ ಕೋರ್ಟ್ ನ್ಯಾಯಾಧೀಶರು ಪ್ರಕರಣದ ವಿಚಾರಣೆ ನಡೆಸಿ, ಅಪರಾಧಿಗಳ ವಿರುದ್ಧ ಹೊರಡಿಸಲಾಗಿರುವ ಡೆತ್ ವಾರಂಟ್ ಆದೇಶದ ಬಗ್ಗೆ ನಾನು ಪುನರ್ ವಿಮರ್ಶಿಸಲು ಹೋಗುವುದಿಲ್ಲ. ಆದರೆ ಕ್ಷಮಾದಾನ ಅರ್ಜಿ ಬಗ್ಗೆ ನಿರ್ಧಾರ ಕೈಗೊಳ್ಳುವವರೆಗೆ ಮರಣದಂಡನೆಗೆ ತಡೆ ನೀಡುವುದಾಗಿ ಹೇಳಿದರು.
ನಾವು ಜನವರಿ 22ರ ಬೆಳಗ್ಗೆ 7ಗಂಟೆಗೆ ನಾಲ್ವರನ್ನು ಗಲ್ಲಿಗೇರಿಸುವುದಿಲ್ಲ ಎಂಬ ಬಗ್ಗೆ ತಿಹಾರ್ ಜೈಲು ಅಧಿಕಾರಿಗಳು ವರದಿ ನೀಡಲಿ ಎಂದು ನ್ಯಾಯಾಧೀಶರು ಈ ಸಂದರ್ಭದಲ್ಲಿ ನಿರ್ದೇಶನ ನೀಡಿದರು. ಈ ಹಿನ್ನೆಲೆಯಲ್ಲಿ ಕಳೆದ ವಾರ ದಿಲ್ಲಿ ಹೈಕೋರ್ಟ್ ಜಾರಿ ಮಾಡಿದ್ದ ಡೆತ್ ವಾರಂಟ್ ಗೆ ತಾತ್ಕಾಲಿಕ ತಡೆ ನೀಡಿದೆ.
ನಿರ್ಭಯಾ ಪ್ರಕರಣದಲ್ಲಿ ದಿಲ್ಲಿ ಕೋರ್ಟ್ ನ ಅಡಿಷನಲ್ ಸೆಷನ್ಸ್ ಜಡ್ಜ್ ಸತೀಶ್ ಕುಮಾರ್ ಆರೋರಾ ಅವರು, ಮುಕೇಶ್, ವಿನಯ್ ಶರ್ಮಾ, ಅಕ್ಷಯ್ ಸಿಂಗ್ ಮತ್ತು ಪವನ್ ಗುಪ್ತಾಗೆ ಜನವರಿ 7ರಂದು ಮರಣದಂಡನೆ ಶಿಕ್ಷೆ ವಿಧಿಸಿದ್ದರು.
5ನೇ ಆರೋಪಿ ರಾಮ್ ಸಿಂಗ್ ವಿಚಾರಣಾ ಸಂದರ್ಭದಲ್ಲಿಯೇ ತಿಹಾರ್ ಜೈಲಿನೊಳಗೆ ಆತ್ಮಹತ್ಯೆಗ ಶರಣಾಗಿದ್ದ. ಪ್ರಕರಣದಲ್ಲಿ ಶಾಮೀಲಾಗಿ ರಾಕ್ಷಸಿ ಕೃತ್ಯ ಎಸಗಿದ್ದ ಬಾಲಾಪರಾಧಿಯನ್ನು ಮೂರು ವರ್ಷಗಳ ಬಳಿಕ ಬಿಡುಗಡೆಗೊಳಿಸಲಾಗಿತ್ತು.
Comments are closed.