ನವದೆಹಲಿ: ರಾಜ್ಯದಲ್ಲಿ ಈ ವರ್ಷದ ಏಪ್ರಿಲ್ 15ರಿಂದ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ ಪಿಆರ್) ಮತ್ತು ಜನಗಣತಿ ಆರಂಭವಾಗಲಿದೆ. ಏತನ್ಮಧ್ಯೆ ಎನ್ ಪಿಆರ್ ಗೆ ಯಾವ ಮಾಹಿತಿ ಕೊಡಬೇಕು, ಯಾವ ಮಾಹಿತಿ ಕೊಡಬಾರದು ಎಂಬ ಬಗ್ಗೆ ಗೊಂದಲ ಮೂಡಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಸ್ಪಷ್ಟನೆಯನ್ನು ನೀಡಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ತಿಳಿಸಿದೆ.
ರಾಷ್ಟ್ರೀಯ ಜನಸಂಖ್ಯಾ ನೋಂದಣಿ ವೇಳೆ ಆಧಾರ್, ಪಾಸ್ ಪೋರ್ಟ್ ನಂಬರ್, ವೋಟರ್ ಐಡಿ ಮತ್ತು ಡ್ರೈವಿಂಗ್ ಲೈಸೆನ್ಸ್ ಹೊಂದಿದ್ದರೆ ಈ ಮಾಹಿತಿಯನ್ನು ನೀಡುವುದು ಕಡ್ಡಾಯ ಎಂದು ಹೇಳಿದೆ.
ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ವಿವರಿಸಿರುವ ಪ್ರಕಾರ, ಎನ್ ಪಿಆರ್ ಮಾಹಿತಿ ಸಂಗ್ರಹದ ವೇಳೆ ನಾವು ಯಾವೆಲ್ಲ ವಿವರಗಳನ್ನು ಸ್ವಯಂ ಅಥವಾ ಆಯ್ಕೆ ಎಂಬಂತೆ ನೀಡಬೇಕಾದರೆ. ಒಂದು ವೇಳೆ (ಮೊದಲ ಹಂತದಲ್ಲಿ) ಆಧಾರ್, ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿ ಅಥವಾ ಪಾಸ್ ಪೋರ್ಟ್ ನಂಬರ್ ಇಲ್ಲದಿದ್ದರೆ ಮಾಹಿತಿ ಕೊಡಬೇಕಾಗಿಲ್ಲ. ಆದರೆ ಮಾಹಿತಿಗಾಗಿ ಯಾವುದಾದರು ಒಂದು ದಾಖಲೆಯನ್ನು ನೀಡಲೇಬೇಕಾಗಿದೆ ಎಂದು ತಿಳಿಸಿದ್ದಾರೆ.
2021ರ ಜನಗಣತಿ ಹಾಗೂ 2020ರ ಎನ್ ಪಿಆರ್ ಗೆ ಕೇಂದ್ರ ಸಚಿವ ಸಂಪುಟ ಅನುಮತಿ ನೀಡಿದ ನಂತರ ಸಚಿವ ಪಿಯೂಷ್ ಗೋಯಲ್ ಮಾತನಾಡಿ, ಎನ್ ಪಿಆರ್ ವೇಳೆ ಆಧಾರ್ ನಂಬರ್ ಕೊಡುವುದು ನಿಮ್ಮ ವಿವೇಚನೆಗೆ ಬಿಟ್ಟಿದ್ದು ಎಂದು ಹೇಳಿದ್ದರು. ಏತನ್ಮಧ್ಯೆ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಜಾವ್ಡೇಕರ್ ನಮ್ಮ ಮಾಹಿತಿಯ ಸ್ವಯಂ ಘೋಷಣೆ ಎಂದಿದ್ದರು. ಕೇಂದ್ರ ಗೃಹ ಖಾತೆ ಸಚಿವ ಅಮಿತ್ ಶಾ ಅವರು, ಸ್ವಯಂ ಪ್ರೇರಿತ ಅಂದರೆ ಅದರ ಅರ್ಥ ಒಂದು ವೇಳೆ ಕೆಲವು ಮಾಹಿತಿ ಇಲ್ಲದಿದ್ದಾಗ ಮಾತ್ರ ಎಂದು ತಿಳಿಸಿದ್ದರು.
ಮಾಹಿತಿ ಕೊಡದಿದ್ದರೆ ಏನಾಗಲಿದೆ ?
ಜಾರಿಯಲ್ಲಿರುವ ಎನ್ ಪಿಆರ್ ಪ್ರಕ್ರಿಯೆ ವೇಳೆ ತಾವು ಅಗತ್ಯ ದಾಖಲೆಗಳ ಮಾಹಿತಿಯನ್ನು ಕೊಡುವುದಿಲ್ಲ ಎಂದು ಹೇಳಿದರೆ. ಇಂತಹ ಸಂದರ್ಭದಲ್ಲಿ ಎನ್ ಪಿಆರ್ ನಿಂದ ಆಗುವ ಲಾಭದ ಬಗ್ಗೆ ವಿವರಿಸಿ ಮಾಹಿತಿ ನೀಡುವಂತೆ ಮನವೊಲಿಸಬೇಕು. ಅಲ್ಲದೇ ಮನೆಯಲ್ಲಿರುವ ಸದಸ್ಯರ ಕುರಿತು ಸರಿಯಾದ ಮಾಹಿತಿಯನ್ನು ಹಂಚಿಕೊಳ್ಳದಿದ್ದರೆ ವಿರಳವಾಗಿ ವಿಧಿಸಲ್ಪಡುವ ಒಂದು ಸಾವಿರ ರೂಪಾಯಿ ದಂಡ ತೆರಲು ಗುರಿಯಾಗಬೇಕಾಗುತ್ತದೆ ಎಂದು ಅಧಿಕಾರಿ ವಿವರಿಸಿದ್ದಾರೆ.
ಅಲ್ಲದೇ ಕಾನೂನು ಪ್ರಕಾರ ಆಯ್ಕೆ(Optional) ಮತ್ತು ಕಡ್ಡಾಯ(Compulsory) ಅಂದರೆ, ಆಧಾರ್ ನಂಬರ್, ಪಾಸ್ ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಅಥವಾ ವೋಟರ್ ಐಡಿ ಒಂದು ವೇಳೆ ನೀವು ಹೊಂದಿಲ್ಲದಿದ್ದರೆ ಎನ್ ಪಿಆರ್ ಫಾರಂನಲ್ಲಿ ಆಯ್ಕೆ ಎಂಬಂತೆ ಖಾಲಿ ಬಿಡಬಹುದಾಗಿದೆ. ಆದರೆ ಎನ್ ಪಿಆರ್ ಫಾರಂನಲ್ಲಿ ಕೇಳಲಾಗಿರುವ ವಿವರಗಳನ್ನು (ಆಧಾರ್, ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿ, ಪಾಸ್ ಪೋರ್ಟ್ ಹೊಂದಿದ್ದರೆ) ಕಡ್ಡಾಯವಾಗಿ ಕೊಡಲೇಬೇಕಾಗಿದೆ ಎಂದು ವಿವರಿಸಿದೆ.
ಮೂಲಗಳ ಪ್ರಕಾರ, ಕಳೆದ ವರ್ಷ ಪೂರ್ವ ಭಾವಿಯಾಗಿ ನಡೆದ ಜನಗಣತಿಯಲ್ಲಿ ಶೇ.80ರಷ್ಟು ಜನರು ಆಧಾರ್ ಮಾಹಿತಿಯನ್ನು ಹಂಚಿಕೊಂಡಿದ್ದರು. ಆದರೆ ಪಾನ್ ಕಾರ್ಡ್ ವಿವರ ನೀಡಲು ನಿರಾಕರಿಸಿರುವುದಾಗಿ ಅಧಿಕಾರಿ ವಿವರಿಸಿದ್ದಾರೆ.
ಜನಗಣತಿಯಲ್ಲಿ ಉದ್ದೇಶಪೂರ್ವಕವಾಗಿ ತಪ್ಪು ಉತ್ತರ ದಾಖಲಿಸಿದ್ದರೆ ಒಂದು ಸಾವಿರ ರೂಪಾಯಿವರೆಗೆ ದಂಡ ಹಾಗೂ ಮೂರು ವರ್ಷಗಳವರೆಗೆ ಜೈಲುಶಿಕ್ಷೆಗೆ ಒಳಗಾಗಬಹುದಾಗಿದೆ ಎಂದು ವರದಿ ವಿವರಿಸಿದೆ. ಜನಗಣತಿ ಮಾಹಿತಿ ಪಡೆಯಲು ಸ್ಥಳೀಯ ಶಾಲಾ ಶಿಕ್ಷಕರು ಅಥವಾ ಸರ್ಕಾರಿ ಸಿಬ್ಬಂದಿಗಳು ಬರಲಿದ್ದು, ಇದು ಸ್ಥಳೀಯವಾಗಿ ಅವರಿಗೆ ಜನರ ಪರಿಚಯವಿರಲಿದೆ. ಹೀಗಾಗಿ ಜನಗಣತಿ ವೇಳೆ ಸರಿಯಾದ ಮಾಹಿತಿಯನ್ನೇ ನೀಡಬೇಕಾಗುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ.
Comments are closed.