ಲಕ್ನೋ: ಪಾಪಿ ಪತಿಯೊಬ್ಬ ತನ್ನ 27 ವರ್ಷದ ಪತ್ನಿಯ ಕತ್ತು ಹಿಸುಕಿ ನಂತರ ಆಕೆಯ ದೇಹವನ್ನು ತುಂಡು ತುಂಡಾಗಿ ಮಾಡಿದಲ್ಲದೇ ಹಿಟ್ಟಿನ ಗಿರಣಿಯಲ್ಲಿ ರುಬ್ಬಿ ಬಳಿಕ ಸುಟ್ಟು ವಿಕೃತಿ ಮೆರೆದಿದ್ದಾನೆ. ಈ ಘಟನೆ ಉತ್ತರ ಪ್ರದೇಶದ ರಾಯ್ ಬರೇಲಿ ಜಿಲ್ಲೆಯಲ್ಲಿ ನಡೆದಿದೆ.
ಈ ಘಟನೆ ಜನವರಿ 4 ರಂದು ನಡೆದಿದ್ದು, ಮಂಗಳವಾರ ಮೃತ ಊರ್ಮಿಳಾಳ ದೊಡ್ಡ ಮಗಳು ಅಜ್ಜಿ ಮನೆಯಲ್ಲಿ ನಡೆದ ಘಟನೆಯನ್ನು ವಿವರಿಸಿದಾಗ ಬೆಳಕಿಗೆ ಬಂದಿದೆ. ಈ ಸಂಬಂಧ ಇದೀಗ ಪೊಲೀಸರು ಪಾಪಿ ಪತಿಯನ್ನು ಬಂಧಿಸಿದ್ದಾರೆ.
ಮೊಮ್ಮಗಳು ಘಟನೆ ವಿವರಿಸಿದ ಕೂಡಲೇ ಮೃತಳ ಕುಟುಂಬಸ್ಥರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ಆರೋಪಿ ರವೀಂದ್ರ ಕುಮಾರ್(35) ನನ್ನು ಬಂಧಿಸಿದ್ದಾರೆ. ಅಲ್ಲದೆ ಇತ್ತ ಸುಟ್ಟ ಊರ್ಮಿಳಾಳ ದೇಹದ ಭಾಗಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ.
ಊರ್ಮಿಳಾ ಕುಟುಂಬದವರು ದೂರು ನೀಡಿದ ತಕ್ಷಣವೇ ಎಚ್ಚೆತ್ತ ಪೊಲೀಸರ ತಂಡ ನೇರವಾಗಿ ಆರೋಪಿ ರವೀಂದ್ರ ಮನೆಗೆ ತೆರಳಿತ್ತು. ಅಲ್ಲದೆ ಇತ್ತ ಡೀಹ್ ಠಾಣಾ ಪೊಲೀಸರಿಗೂ ಮಾಹಿತಿ ರವಾನಿಸಿದ್ದಾರೆ. ಜನವರಿ 10ರಂದು ಊರ್ಮಿಳಾ ಸಹೋದರಿ ವಿದ್ಯಾ ದೇವಿ ಡೀಹ್ ಪೊಲೀಸ್ ಠಾಣೆಗೆ ತೆರಳಿ ರವೀಂದ್ರ ವಿರುದ್ಧ ದೂರು ನಿಡಿದ್ದರು. ದೂರಿನಲ್ಲಿ ರವೀಂದ್ರ ತನ್ನ ಸಹೋದರಿ ಊರ್ಮಿಳಾಳನ್ನು ಕೊಲೆಗೈಯಲು ಯತ್ನಿಸಿದ್ದಾನೆ ಎಂದು ತಿಳಿಸಿದ್ದರು ಎಂದು ಪೊಲೀಸ್ ಅಧಿಕಾರಿ ವಿನೀತ್ ಸಿಂಗ್ ಹೇಳಿದ್ದಾರೆ.
ರವೀಂದ್ರ ಕುಮಾರ್ ಜನವರಿ 4 ರಂದು ಪೊಲೀಸ್ ಠಾಣೆಗೆ ಕರೆ ಮಾಡಿ, ಪತ್ನಿ ನಾಪತ್ತೆಯಾಗಿದ್ದಾಳೆ ಎಂದು ತಿಳಿಸಿರುವುದಾಗಿ ಸಿಂಗ್ ಹೇಳಿದ್ದಾರೆ. 2011ರಲ್ಲಿ ರವೀಂದ್ರ ಹಾಗೂ ಊರ್ಮಿಳಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ನಂತರ ಈ ದಂಪತಿಗೆ 11 ಹಾಗೂ 7 ವರ್ಷದ ಇಬ್ಬರು ಹೆಣ್ಣುಮಕ್ಕಳು ಹುಟ್ಟಿದ್ದಾರೆ.
ಪೊಲೀಸರ ಪ್ರಕಾರ, ರವೀಂದ್ರಗೆ ತನ್ನ ಕುಟುಂಬಕ್ಕೆ ಒಂದು ಗಂಡು ಬೇಕು ಎನ್ನುವ ಬಯಕೆಯಿತ್ತು. ಸದ್ಯ ಆಕೆ ಗರ್ಭಿಣಿಯಾಗಿದ್ದು, ಮತ್ತೆ ಹೆಣ್ಣು ಮಗು ಹುಟ್ಟಬಹುದೆಂಬ ಸಂಶಯದಿಂದ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಿದ್ದಾರೆ. ಇತ್ತ ಊರ್ಮಿಳಾಳ ದೊಡ್ಡ ಮಗಳು, ತಾಯಿಯ ಕೊಲೆಯಲ್ಲಿ ಅಜ್ಜ ಕರಮ್ ಚಂದ್ರ ಹಾಗೂ ಅಂಕಲ್ ಸಂಜೀವ್ ಹಾಗೂ ಬ್ರಿಜೇಶ್ ಪಾತ್ರವಿದೆ ಎಂದು ಆರೋಪಿಸಿದ್ದಾಳೆ. ಹೀಗಾಗಿ ಉಳಿದ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಇದಕ್ಕಾಗಿ ಪೊಲೀಸರು 6 ತಂಡಗಳನ್ನು ರಚಿಸಿದ್ದು, ಎಲ್ಲರನ್ನೂ ಬಂಧಿಸುವಲ್ಲಿ ತಂಡ ಯಶಸ್ವಿಯಾಗಿದೆ.
ತನಿಖೆಯ ವೇಳೆ ರವೀಂದ್ರ ಕುಮಾರ್, ತಾನು ಮಾಡಿದ್ದ ತಪ್ಪನ್ನು ಒಪ್ಪಿಕೊಂಡಿದ್ದಾನೆ. ನನ್ನ ಹಾಗೂ ಪತ್ನಿಯ ನಡುವೆ ಮಾತಿಗೆ ಮಾತು ಬೆಳೆದಿದ್ದು, ಕೋಪಗೊಂಡು ಆಕೆಯ ಕತ್ತು ಹಿಸುಕಿದ್ದೇನೆ. ಅಲ್ಲದೆ ನಂತರ ಮೃತದೇಹವನ್ನು ಹರಿತವಾದ ಆಯುಧದಿಂದ ತುಂಡು ತುಂಡಾಗಿ ಕತ್ತರಿಸಿ, ನಂತರ ಹಿಟ್ಟಿನ ಗಿರಣಿ ಮೆಷಿನ್ ನಲ್ಲಿ ಹಾಕಿ ಗ್ರೈಂಡ್ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾನೆ. ನಂತರ ದೇಹದ ಕೆಲ ಬಾಗಗಳಿಗೆ ಬೆಂಕಿ ಇಟ್ಟು ಸುಟ್ಟಿದ್ದೇನೆ. ಆ ಬೂದಿಯನ್ನು ಬ್ಯಾಗಿನಲ್ಲಿ ತುಂಬಿಸಿ ಮನೆಯಿಂದ 4 ಕಿ.ಮೀ ದೂರದಲ್ಲಿ ಬಿಸಾಕಿರುವುದಾಗಿ ತನ್ನ ನೀಚ ಕೃತ್ಯವನ್ನು ಬಯಲು ಮಾಡಿದ್ದಾನೆ.
Comments are closed.