ರಾಷ್ಟ್ರೀಯ

ಪ್ರಥಮ ವಿವಾಹ ವಾರ್ಷಿಕೋತ್ಸವದಂದೇ ಹೆಂಡತಿಯ ಹತ್ಯೆ ಮಾಡಿ, ಆತ್ಮಹತ್ಯೆ ಮಾಡ್ಕೊಂಡ

Pinterest LinkedIn Tumblr


ಚಂಡೀಗಢ್: ಮೊದಲನೇ ವಿವಾಹ ವಾರ್ಷಿಕೋತ್ಸವದಂದೇ ಪತಿಯೊಬ್ಬ ತನ್ನ ಪತ್ನಿಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಹರಿಯಾಣದ ರಾಜೀವ್ ಕಾಲೋನಿಯಲ್ಲಿ ನಡೆದಿದೆ.

21 ವರ್ಷದ ಫೈಝಾನ್ ತನ್ನ ಪತ್ನಿ ಶಾಬ್-ಇ-ನೂರ್ ನನ್ನು ಕೊಲೆ ಮಾಡಿ ಚಲಿಸುತ್ತಿದ್ದ ರೈಲಿನ ಮುಂದೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬುಧವಾರ ಫೈಝಾನ್ ಹಾಗೂ ಶಾಬ್‍ನ ಮೊದಲನೇ ವಿವಾಹ ವಾರ್ಷಿಕೋತ್ಸವವಿತ್ತು. ಈ ನಡುವೆ ಇಬ್ಬರ ನಡುವೆ ಜಗಳವಾಗಿದೆ. ಜಗಳ ವಿಕೋಪಕ್ಕೆ ತೆರಳಿ ಫೈಝಾನ್ ತನ್ನ ಪತ್ನಿಯನ್ನು ಮೊಬೈಲ್ ಚಾರ್ಜಿಂಗ್ ವೈರ್ ಯಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಮರುದಿನ ಬೆಳಗ್ಗೆ ತಾನೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಬಗ್ಗೆ ಎಸ್‍ಎಚ್‍ಒ ಅಧಿಕಾರಿ ನವೀನ್ ಶಹಾರಾನ್ ಪ್ರತಿಕ್ರಿಯಿಸಿ, ಬುಧವಾರ ರಾತ್ರಿ ಫೈಝಾನ್ ಚಾರ್ಜಿಂಗ್ ವೈರ್ ನಿಂದ ತನ್ನ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಮರುದಿನ ಬೆಳಗ್ಗೆ ವಿಕಾಸ್ ನಗರಕ್ಕೆ ಹೋಗಿ ಅಲ್ಲಿ ಚಲಿಸುತ್ತಿದ್ದ ರೈಲಿನ ಮುಂದೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸದ್ಯ ಮಹಿಳೆಯ ಮೃತದೇಹವನ್ನು ಸಿವಿಲ್ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದ್ದು, ವಿಧಿವಿಜ್ಞಾನ ಪ್ರಯೋಗಾಲಯ ತಂಡ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ವೈರನ್ನು ಮಹಿಳೆಯ ಕುತ್ತಿಗೆಗೆ ಸುತ್ತಿಸಲಾಗಿತ್ತು ಎಂಬುದು ತಿಳಿದು ಬಂದಿದೆ.

ಫೈಯಾನ್ ತಂದೆ ದಿಲ್‍ಶಾದ್ ಈ ಬಗ್ಗೆ ಪ್ರತಿಕ್ರಿಯಿಸಿ, ನನ್ನ ಸೊಸೆ ಹಲವು ಪುರುಷರ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಇತ್ತೀಚೆಗೆ ನನ್ನ ಮಗ ಆಕೆಯ ಹಾಗೂ ಆಕೆಯ ಪ್ರಿಯಕರನ ಕಾಲ್ ಡೀಟೆಲ್ಸ್ ತಂದಿದ್ದನು. ಬುಧವಾರ ಶಾಬ್ ವಿವಾಹ ವಾರ್ಷಿಕೋತ್ಸವಕ್ಕೆ ಏನೂ ಉಡುಗೊರೆ ಕೊಟ್ಟಿಲ್ಲ ಎಂದು ಜಗಳವಾಡುತ್ತಿದ್ದಳು. ಶಾಬ್ ಅದ್ಧೂರಿ ಜೀವನಶೈಲಿ ನಡೆಸಬೇಕು ಎಂದು ಹೇಳುತ್ತಿದ್ದಳು. ಅಲ್ಲದೆ ಪ್ರತಿದಿನ ಮಾಂಸಹಾರ ತಿನ್ನಬೇಕು, ಆದರೆ ನಮಗೆ ಕೇವಲ ತರಕಾರಿ ತರಲು ಆಗುತ್ತಿತ್ತು ಎಂದು ಹೇಳಿದ್ದಾರೆ.

ಫೈಝಾನ್ ಮೃತದೇಹ ಗುರುವಾರ ಬೆಳಗ್ಗೆ 9.30ಕ್ಕೆ ಪತ್ತೆಯಾಗಿದ್ದು, 10 ಗಂಟೆಗೆ ಪತ್ನಿಯ ಮೃತದೇಹ ಪತ್ತೆಯಾಗಿದೆ. ಪೊಲೀಸರಿಗೆ ಮಾಹಿತಿ ಸಿಕ್ಕ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಫೈಝಾನ್ ಸೈಕಲ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದನು. ಮಹಿಳೆಯ ಪೋಷಕರು ಮೀರತ್‍ನಲ್ಲಿದ್ದ ಕಾರಣ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ನಡೆಸಲಿಲ್ಲ ಎಂದು ವರದಿಯಾಗಿದೆ.

Comments are closed.