ಹೈದರಾಬಾದ್: 11 ವರ್ಷದ ಪ್ರೀತಿಗಾಗಿ ಕ್ರಿಶ್ಚಿಯನ್‍ನಿಂದ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡ ಯುವಕನೋರ್ವ ಈಗ ಪ್ರೇಯಸಿಗಾಗಿ ಮಾನವ ಹಕ್ಕು ಆಯೋಗದ ಮೊರೆ ಹೋಗಿದ್ದಾನೆ.
ಕ್ರಿಶ್ಚಿಯನ್ ಆಗಿದ್ದ ಬಾಬ್ಬಿಲಿ ಭಾಸ್ಕರ್(26) ಮುಸ್ಲಿಂ ಯುವತಿಯನ್ನು ಕಳೆದ 11 ವರ್ಷಗಳಿಂದ ಪ್ರೀತಿಸುತ್ತಿದ್ದಾನೆ. ಆದರೆ ಯುವತಿ ತಂದೆ ನೀನು ಮುಸ್ಲಿಂ ಆಗಿ ಮತಾಂತರಗೊಂಡರೆ ನನ್ನ ಮಗಳನ್ನು ನಿನ್ನ ಜೊತೆ ಮಾದುವೆ ಮಾಡಿಸುತ್ತೇನೆ ಎಂದು ಷರತ್ತು ಹಾಕಿದ್ದರು. ಆದ್ದರಿಂದ ಬಾಬ್ಬಿಲಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡನು. ಬಳಿಕ ತನ್ನ ಹೆಸರನ್ನು ಮೊಹ್ಮದ್ ಅಬ್ದುಲ್ ಎಂದು ಬದಲಿಸಿಕೊಂಡನು.
ನಾನು ಮತಾಂತರಗೊಂಡಿದ್ದೇನೆ ಇನ್ನಾದರೂ ನನ್ನ ಪ್ರೇಯಸಿಯನ್ನು ಮದುವೆ ಆಗಿ ಚೆನ್ನಾಗಿರಬಹುದು ಎಂದು ಮೊಹ್ಮದ್ ಖುಷಿಯಾಗಿದ್ದನು. ಇದೇ ಖುಷಿಯಲ್ಲಿ ಪ್ರೇಯಸಿ ಮನೆಗೆ ಮೊಹ್ಮದ್ ಮದುವೆ ಬಗ್ಗೆ ಮಾತನಾಡಲು ಹೋಗಿದ್ದಾನೆ. ಆದರೆ ಯುವತಿ ತಂದೆ ಮಾತ್ರ, ನನ್ನ ಮಗಳನ್ನು ನಿನಗೆ ಕೊಟ್ಟು ಮದುವೆ ಮಾಡಲ್ಲ ಎಂದು ವರಸೆ ಬದಲಿಸಿದ್ದಾರೆ ಎಂದು ಮೊಹ್ಮದ್ ಆರೋಪಿಸಿದ್ದಾನೆ. ಜೊತೆಗೆ ನನ್ನ ಮೇಲೆ ಹಲ್ಲೆ ಕೂಡ ಮಾಡಿದ್ದಾರೆ. ಕಳೆದ 1 ವರ್ಷದಿಂದ ನನ್ನ ಪ್ರೇಯಸಿಯನ್ನು ನಾನು ನೋಡಿಲ್ಲ. ಆಕೆಯನ್ನು ನಾನು ಭೇಟಿ ಮಾಡೋದಕ್ಕೆ ಬಿಟ್ಟಿಲ್ಲ. ನಮ್ಮಿಬ್ಬರನ್ನು ಆಕೆಯ ತಂದೆ ದೂರ ಮಾಡಿದ್ದಾರೆ. ಅವಳು ಬದುಕ್ಕಿದ್ದಾಳೋ? ಇಲ್ಲವೋ? ಎನ್ನುವುದು ಕೂಡ ನನಗೆ ಗೊತ್ತಿಲ್ಲ. ಇದೇ ಕಾರಣಕ್ಕೆ ನಾನು ಈಗ ಮಾನವ ಹಕ್ಕು ಆಯೋಗದ ಮೊರೆ ಹೋಗಿದ್ದೇನೆ ಎಂದು ಮೊಹ್ಮದ್ ಹೇಳಿದ್ದಾನೆ.
ನಾನು ಸಾಕಷ್ಟು ಬಾರಿ ಪ್ರೇಯಸಿ ಜೊತೆ ಮಾತನಾಡಲು ಅವಕಾಶ ಕೊಡಿ ಎಂದು ಆಕೆಯ ತಂದೆ ಬಳಿ ಅಂಗಲಾಚಿದ್ದೇನೆ. ಆದರೆ ಅವರು ನನಗೆ ಆಕೆಯನ್ನು ನೋಡಲು ಅಥವಾ ಆಕೆಯೊಂದಿಗೆ ಮತನಾಡಲು ಅವಕಾಶ ನೀಡಿಲ್ಲ. ಒಂದು ವೇಳೆ ನನ್ನ ಪ್ರೀತಿ ನನಗೆ ಸಿಗದಿದ್ದರೂ ನಾನು ಧರ್ಮವನ್ನು ಬಿಡಲ್ಲ. ನನ್ನ ಜೀವ ಇರುವವರೆಗೂ ಮುಸ್ಲಿಂ ಧರ್ಮವನ್ನೇ ಪಾಲಿಸುತ್ತೇನೆ ಎಂದು ತಿಳಿಸಿದ್ದಾನೆ.
ಪ್ರೇಯಸಿಯನ್ನು ತನ್ನಿಂದ ದೂರ ಮಾಡಿ, ತನ್ನ ಮೇಲೆ ಹಲ್ಲೆ ನಡೆಸಿದ್ದಕ್ಕೆ ಮೊಹ್ಮದ್ ಮಾನವ ಹಕ್ಕು ಆಯೋಗಕ್ಕೆ ಯುವತಿಯ ಕುಟುಂಬದ ವಿರುದ್ಧ ದೂರು ದಾಖಲಿಸಿದ್ದಾನೆ. ನನಗೆ ಪ್ರೀತಿ ಮಾಡುವ ಹಕ್ಕಿದೆ. ಪ್ರೀತಿಸಿದವಳನ್ನು ಮದುವೆ ಆಗುವ ಹಕ್ಕು ಕೂಡ ಇದೆ ಎಂದು ಮೊಹ್ಮದ್ ಈ ನಿರ್ಧಾರ ತೆಗೆದುಕೊಂಡಿದ್ದಾನೆ.
Comments are closed.