ರಾಷ್ಟ್ರೀಯ

ಸಮುದ್ರದ ಬಂಡೆಗೆ ಮಗು ಎಸೆದು ಗಂಡನೇ ಕೊಲೆಗಾರ ಎಂದಳು

Pinterest LinkedIn Tumblr


ತಿರುವನಂತಪುರ: ಸ್ವಂತ ಮಗುವನ್ನು ಸಮುದ್ರದ ಬಂಡೆಗೆ ಎಸೆದು ಕೊಲೆ ಮಾಡಿದ ಆರೋಪದ ಮೇರೆಗೆ 22 ವರ್ಷದ ಮಹಿಳೆಯನ್ನು ಪೊಲೀಸರು ಬಂಧಿಸಿರುವ ಘಟನೆ ಕೇರಳದ ಕಣ್ಣೂರು ನಗರದಲ್ಲಿ ನಡೆದಿದೆ.

ಶರಣ್ಯ ಬಂಧಿತ ಆರೋಪಿ. ಮಗುವಿನ ಕೊಲೆಗೆ ಸಂಬಂಧಿಸಿದಂತೆ ಸಂಗ್ರಹಿಸಿದ ಸಾಕ್ಷ್ಯಗಳ ಆಧಾರದ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸ್ಥಳೀಯರು ಆರೋಪಿ ಶರಣ್ಯಳ ಒಂದೂವರೆ ವರ್ಷದ ಮಗನ ಶವವನ್ನು ಪತ್ತೆ ಹಚ್ಚಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪ್ರಾಥಮಿಕ ತನಿಖೆಯ ವೇಳೆ ಶರಣ್ಯ ತನ್ನ ಮಗುವಿನ ಸಾವಿಗೆ ಪತಿ ಕಾರಣ ಎಂದು ಪೊಲೀಸರಿಗೆ ತಿಳಿಸಿದ್ದಳು.

ಆಕೆಯ ಹೇಳಿಕೆಯ ಆಧಾರದ ಮೇಲೆ ಪತಿಯನ್ನು ಪೊಲೀಸರು ಬಂಧಿಸಿದ್ದರು. ಆದರೆ ಸಾಕ್ಷಿಗಳು ಶರಣ್ಯ ಪರವಾಗಿದ್ದವು. ಹೀಗಾಗಿ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಆಗ ಆರೋಪಿ ಸತ್ಯ ಬಾಯಿಬಿಟ್ಟಿದ್ದಾಳೆ. ತಾನೇ ಮಗುವನ್ನು ಕೊಲೆ ಮಾಡಿರುವುದಾಗಿ ತನಿಖಾಧಿಕಾರಿಗಳ ಬಳಿ ಒಪ್ಪಿಕೊಂಡಿದ್ದಾಳೆ.

ಸಮುದ್ರದಲ್ಲಿ ಬಂಡೆಗೆ ಮಗುವನ್ನು ಎಸೆಯುವ ಮೂಲಕ ಸ್ವಂತ ಮಗನನ್ನು ಕೊಲೆ ಮಾಡಿದ್ದಾಳೆ. ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಲವ್ವರ್ ಜೊತೆ ಹೊಸ ಜೀವನವನ್ನು ಪ್ರಾರಂಭಿಸಲು ಇಷ್ಟಪಟ್ಟಿದ್ದಳು. ಹೀಗಾಗಿ ಮಗುವನ್ನು ಕೊಲೆ ಮಾಡಿ, ಆ ಕೊಲೆಯನ್ನು ಪತಿ ಮಾಡಿದ್ದಾನೆ ಎಂದು ಸೂಚಿಸಿದ್ದಳು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಏನಿದು ಪ್ರಕರಣ?
ಕೇರಳದ ಕಣ್ಣೂರು ಜಿಲ್ಲೆಯ ಥೈಯಿಲ್ ಸಮುದ್ರ ತೀರದಲ್ಲಿ ಸೋಮವಾರ ಒಂದೂವರೆ ವರ್ಷದ ಪುಟ್ಟ ಮಗುವಿನ ಶವ ಪತ್ತೆಯಾಗಿತ್ತು. ಸೋಮವಾರ ಬೆಳಿಗ್ಗೆ 6 ಗಂಟೆಗೆ ಮಗುವಿನ ತಂದೆ ಪ್ರಣವ್ ಕಣ್ಣೂರು ನಗರ ಪೊಲೀಸ್ ಠಾಣೆಯಲ್ಲಿ ಮಗ ವಿಯಾನ್ ನಾಪತ್ತೆಯಾಗಿದ್ದಾನೆ ಎಂದು ದೂರು ದಾಖಲಿಸಿದ್ದರು. ನಂತರ ಪೋಷಕರು ಮತ್ತು ಪೊಲೀಸರು ನೆರೆಹೊರೆಯವರ ಸಹಾಯದಿಂದ ಹತ್ತಿರದ ಸ್ಥಳಗಳಲ್ಲಿ ಹುಡುಕಲು ಪ್ರಾರಂಭಿಸಿದರು.

ಬೆಳಿಗ್ಗೆ 9 ಗಂಟೆಗೆ ಅವರ ಮನೆಯಿಂದ ಕೇವಲ 50 ಮೀಟರ್ ದೂರದಲ್ಲಿರುವ ಸಮುದ್ರ ತೀರದಲ್ಲಿ ಬಂಡೆಗಳ ಮಧ್ಯೆ ವಿಯಾನ್ ಶವವಾಗಿ ಬಿದ್ದಿರುವುದು ಕಂಡುಬಂದಿದೆ. ಘಟನೆಯ ನಂತರ ಕಣ್ಣೂರು ನಗರ ಪೊಲೀಸರು ಮೊದಲು ವಿಯಾನ್ ತಂದೆ ಪ್ರಣವ್ ಮತ್ತು ನಂತರ ತಾಯಿ ಶರಣ್ಯ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದರು. ಈ ವೇಳೆ ಇವರಿಬ್ಬರ ಹೇಳಿಕೆಗಳು ಹೊಂದಾಣಿಕೆಯಾಗುತ್ತಿರಲಿಲ್ಲ. ಹೀಗಾಗಿ ಮಗುವಿನ ಸಾವಿನ ಹಿಂದೆ ಇಬ್ಬರಲ್ಲಿ ಒಬ್ಬರು ಇದ್ದಾರೆ ಎಂದು ಪೊಲೀಸರು ಶಂಕಿಸಿದ್ದರು.

ಸದ್ಯಕ್ಕೆ ಪೊಲೀಸರು ಆರೋಪಿ ಶರಣ್ಯಳನ್ನು ಬಂಧಿಸಿದ್ದಾರೆ. ಆಕೆಯ ಕೃತ್ಯವನ್ನು ತಿಳಿದು ಆಕ್ರೋಶಗೊಂಡ ಸ್ಥಳೀಯರು ಆರೋಪಿ ಶರಣ್ಯ ಳ ಮೇಲೆ ಹಲ್ಲೆ ಮಾಡಿದ್ದರು. ಬಂಧಿತ ಆರೋಪಿಯನ್ನು ಪೊಲೀಸರು ಬುಧವಾರ ಜಿಲ್ಲಾ ಮ್ಯಾಜಿಸ್ಟ್ರೇಟ್ ನ್ಯಾಯಲಯಾಕ್ಕೆ ಹಾಜರುಪಡಿಸಿದ್ದರು.

Comments are closed.