ನವದೆಹಲಿ: ಕಳೆದ ಕೆಲವು ದಿನಗಳಿಂದ ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಈಗಾಗಲೇ 39 ಜನರು ಮೃತಪಟ್ಟಿದ್ದು, 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ಮಧ್ಯೆ ಕಷ್ಟದಲ್ಲಿದ್ದ ಆರು ಮಂದಿ ಮುಸ್ಲಿಮರ ಪ್ರಾಣವನ್ನು ಕಾಪಾಡಿದ ಹಿಂದೂ ವ್ಯಕ್ತಿಯೊಬ್ಬರು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಹೌದು. ದೆಹಲಿಯ ಹಿಂಸಾಚಾರದ ಮಧ್ಯೆಯೂ ಅಗತ್ಯವಿರುವವರಿಗೆ ಅನೇಕ ಮಂದಿ ಮನೆಯಿಂದ ಹೊರ ಬಂದು ಸಹಾಯ ಮಾಡಿದ್ದಾರೆ. ದೆಹಲಿಯ ದಂಗೆಯಲ್ಲಿ ದುಷ್ಕರ್ಮಿಗಳು ಮುಸ್ಲಿಮರ ಮನೆ ಮತ್ತು ಅಂಗಡಿಗಳ ಮೇಲೆ ದಾಳಿ ನಡೆಸಿ, ಬೆಂಕಿ ಹಚ್ಚಿದ್ದರು. ಈ ವೇಳೆ ಸ್ಥಳೀಯ ಹಿಂದೂಗಳು ಮುಸ್ಲಿಮರ ನೆರವಿಗೆ ಧಾವಿಸಿ ತಮ್ಮ ಮನೆಗಳಲ್ಲಿ, ಗುರುದ್ವಾರಗಳಲ್ಲಿ ಆಶ್ರಯ ನೀಡುವ ಮೂಲಕ ಸಹಾಯದ ಹಸ್ತಚಾಚಿದ್ದರು.
ಇದೇ ಸಂದರ್ಭದಲ್ಲಿ ದುಷ್ಕರ್ಮಿಗಳು ಮನೆಗೆ ಬೆಂಕಿ ಹಚ್ಚಿದಾಗ ಪ್ರೇಮ್ಕಾಂತ್ ಬಾಘೆಲ್ ಬೆಂಕಿ ಅವಘಡದಿಂದ ನೆರೆಹೊರೆಯ ಆರು ಮಂದಿ ಮುಸ್ಲಿಮರ ಜೀವ ಉಳಿಸಿದ್ದಾರೆ. ಶಿವ್ ವಿಹಾರ್ ದಲ್ಲಿ ಹಿಂದೂ-ಮುಸ್ಲಿಮರು ಸಾಮರಸ್ಯದಿಂದ ವಾಸಿಸುತ್ತಿದ್ದರು. ಆದರೆ ಗಲಭೆಯಲ್ಲಿ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದು ಮುಸ್ಲಿಂ ಮನೆಗಳಿಗೆ ಬೆಂಕಿ ಹಚ್ಚಿದ್ದರು.
ಈ ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ಬಾಘೆಲ್ ತಕ್ಷಣ ಬೆಂಕಿ ಹೊತ್ತಿಕೊಂಡಿದ್ದ ಮನೆಯೊಳಗೆ ನುಗ್ಗಿದ್ದಾರೆ. ಅಲ್ಲದೆ ತನ್ನ ಪ್ರಾಣವನ್ನು ಲೆಕ್ಕಿಸದೆ ಬೆಂಕಿಯಲ್ಲಿ ಸಿಲುಕಿಕೊಂಡಿದ್ದ ಆರು ಮಂದಿ ನೆರೆಹೊರೆಯವರನ್ನು ರಕ್ಷಿಸಿದ್ದಾರೆ. ಈ ವೇಳೆ ತನ್ನ ಸ್ನೇಹಿತನ ವಯಸ್ಸಾದ ತಾಯಿಯನ್ನು ಕಾಪಾಡುವಾಗ ಬಾಘೆಲ್ಗೆ ಗಂಭೀರವಾದ ಗಾಯಗಳಾಗಿವೆ.
ಸುಟ್ಟ ಗಾಯಗಳಿಂದ ನರಳಾಡುತ್ತಿದ್ದ ಬಾಘೆಲ್ನನ್ನು ಆಸ್ಪತ್ರೆಗೆ ದಾಖಲಿಸಲು ಯಾರೊಬ್ಬರೂ ವಾಹನ ನೀಡಲಿಲ್ಲ. ನೆರೆಹೊರೆಯವರು ಅಂಬುಲೆನ್ಸ್ ಗೆ ಫೋನ್ ಮಾಡಿದರೂ ಯಾವುದೇ ವೈದ್ಯಕೀಯ ವಾಹನವೂ ಬರಲಿಲ್ಲ. ಕೊನೆಗೆ ಬಾಘೆಲ್ ಇಡೀ ರಾತ್ರಿ ಶೇ.70 ರಷ್ಟು ಸುಟ್ಟಗಾಯಗಳೊಂದಿಗೆ ತನ್ನ ಮನೆಯಲ್ಲಿ ಕಳೆದಿದ್ದಾರೆ. ಬಾಘೆಲ್ ಸ್ನೇಹಿತರು ಮತ್ತು ಕುಟುಂಬದವರು ಆತ ಬದುಕುವ ಭರವಸೆಯನ್ನು ಕಳೆದುಕೊಂಡಿದ್ದಾರೆ. ಬೆಳಗ್ಗೆ ಬಾಘೆಲ್ ಅವರನ್ನು ಜಿಟಿಬಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸದ್ಯ ಆಸ್ಪತ್ರೆಯಲ್ಲಿ ಬಾಘೆಲ್ಗೆ ಚಿಕಿತ್ಸೆ ನಡೆಯುತ್ತಿದ್ದು, ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಆದರೆ ಸಾವಿನ ಅಂಚಿನಲ್ಲಿದ್ದ ತನ್ನ ಸ್ನೇಹಿತನ ತಾಯಿಯ ಜೀವವನ್ನು ಉಳಿಸಲು ಸಾಧ್ಯವಾಯಿತು ಎಂದು ಸಂತೋಷಪಟ್ಟಿದ್ದಾರೆ.
Comments are closed.