ರಾಷ್ಟ್ರೀಯ

ಭೂಮಿ ಅಗೆಯುತ್ತಿದ್ದಾಗ 1.716 ಕೆ.ಜಿ. ತೂಕದ ಚಿನ್ನದ ನಾಣ್ಯ ತುಂಬಿರುವ ನಿಧಿ ಪತ್ತೆ

Pinterest LinkedIn Tumblr


ಚೆನ್ನೈ: ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿನ ಪುರಾತನ ಪ್ರಸಿದ್ಧ ದೇವಾಸ್ಥಾನದಲ್ಲಿ ಚಿನ್ನದ ನಾಣ್ಯಗಳು ತುಂಬಿರುವ ಪಾತ್ರೆಯೊಂದು ಪತ್ತೆಯಾಗಿದೆ.

ತಿರುವನೈಕಾವಲ್ ನ ಜಂಬುಕೇಶ್ವರ ದೇವಸ್ಥಾನದಲ್ಲಿ ಈ ನಿಧಿ ಪತ್ತೆಯಾಗಿದೆ. ಅಕಿಲಾಂಡೇಶ್ವರಿ ದೇಗುಲದ ಬಳಿ ಖಾಲಿ ಜಾಗವನ್ನು ಕಾರ್ಮಿಕರು ಅಗೆಯುತ್ತಿದ್ದಾಗ ಪಾತ್ರೆಯೊಂದು ಸಿಕ್ಕಿದೆ. ಅದರಲ್ಲಿ 505 ನ್ಯಾಣಗಳು ಸಿಕ್ಕಿದೆ. ಮೂಲಗಳ ಪ್ರಕಾರ ಹಿತ್ತಾಳೆ ಪಾತ್ರೆಯೊಂದರಲ್ಲಿ ಚಿನ್ನದ ನಾಣ್ಯಗಳು ಸಿಕ್ಕಿದ್ದು, ಆ ಪಾತ್ರೆಯಲ್ಲಿ ಒಟ್ಟು 505 ನ್ಯಾಣಗಳು ದೊರೆತಿವೆ. ಇವುಗಳ ಒಟ್ಟಾರೆ ತೂಕ 1.716 ಕೆ.ಜಿ ಎಂದು ತಿಳಿದುಬಂದಿದೆ.

ಅಕಿಲಾಂಡೇಶ್ವರಿ ದೇಗುಲ:
ಅಕಿಲಾಂಡೇಶ್ವರಿ ಸಮೇಧಾ ಜಂಬುಕೇಶ್ವರ ದೇವಸ್ಥಾನವನ್ನು 1800 ವರ್ಷಗಳ ಹಿಂದೆ ಚೋಳರ ರಾಜ ಕೊಚ್ಚೆಂಗನ್ನನ್ ನಿರ್ಮಾಣ ಮಾಡಿದ್ದ ಎಂದು ಪುರಾತತ್ವ ಇಲಾಖೆ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚೆಗೆ ದೇಗುಲದ ಆಡಳಿತ ಬಂಡಳಿ ದೇವಸ್ಥಾನದ ಆವರಣದಲ್ಲಿ ಹೂವಿನ ತೋಟ ನಿರ್ಮಾಣ ಮಾಡಲು ಜೀರ್ಣೋದ್ಧಾರ ಕೆಲಸವನ್ನು ಶುರುಮಾಡಿತ್ತು.

ಅಂಬಲ್ ಸನ್ನಿಧಿ ಎದುರಿಗಿರುವ ವಲೈ ಕೊಟ್ಟಂನಲ್ಲಿ ಕಾರ್ಮಿಕರು ಪೊದೆ ಮತ್ತು ಗಿಡಗಳ ಮಧ್ಯೆ ಸ್ವಚ್ಛತೆ ಮಾಡುತ್ತಿದ್ದರು. ಆಗ ಭೂಮಿಯನ್ನು ಅಗೆಯುತ್ತಿದ್ದಾಗ ಹಿತ್ತಾಳೆಯ ಪಾತ್ರೆಯೊಂದು ಸಿಕ್ಕಿದೆ. ನಂತರ ಕಾರ್ಮಿಕರು ಕುತೂಹಲದಿಂದ ಅದರ ಮುಚ್ಚಳವನ್ನು ತೆರೆದು ನೋಡಿದಾಗ ಚಿನ್ನದ ನಾಣ್ಯಗಳು ಪತ್ತೆಯಾಗಿವೆ. ತಕ್ಷಣ ಅವರು ಜಿಲ್ಲಾಡಳಿತಕ್ಕೆ ಮಾಹಿತಿಯನ್ನು ತಿಳಿಸಿದ್ದಾರೆ.

ಮಾಹಿತಿ ತಿಳಿದು ಶ್ರೀರಂಗಂ ತಹಶೀಲ್ದಾರ್ ಮತ್ತು ಪೊಲೀಸರು ದೇವಸ್ಥಾನಕ್ಕೆ ಬಂದು ಪರಿಶೀಲನೆ ಮಾಡಿದ್ದಾರೆ. ಆ ಪಾತ್ರೆಯಲ್ಲಿ 505 ಚಿನ್ನದ ನಾಣ್ಯಗಳಿದ್ದು, ಅದರ ತೂಕ ಸುಮಾರು 1.716 ಕೆ.ಜಿ ಎಂದು ಲೆಕ್ಕ ಹಾಕಿದ್ದಾರೆ. ನಾಣ್ಯಗಳ ಮೇಲೆ ಐತಿಹಾಸಿಕ ಶಾಸನ ಮತ್ತು ಚಿಹ್ನೆ ಇದೆ. ಹೀಗಾಗಿ ಪುರಾತತ್ವ ಇಲಾಖೆಯ ಅಧಿಕಾರಿಗಳು ನಾಣ್ಯಗಳನ್ನು ವಶಪಡಿಸಿಕೊಂಡಿದ್ದಾರೆ.

ಸದ್ಯಕ್ಕೆ ಸುರಕ್ಷಿತವಾಗಿ ನಾಣ್ಯಗಳನ್ನು ಖಜಾನೆಯಲ್ಲಿಡಲಾಗಿದೆ. ನಾಣ್ಯಗಳ ಮೇಲೆ ಅರೇಬಿಕ್ ಲಿಪಿಯ ಅಕ್ಷರವಿದ್ದು, ಇದು ಕ್ರಿ.ಶ 1000-1200ರ ಕಾಲದ ನಾಣ್ಯ ಇರಬಹುದು ಎಂದು ಅಂದಾಜಿಸಲಾಗಿದೆ.

Comments are closed.