ನವದೆಹಲಿ (ಫೆ.29): ದೆಹಲಿಯಲ್ಲಿ ನಡೆದ ಹಿಂಸಾಚಾರಕ್ಕೂ ಮೊದಲು ದ್ವೇಷ ಭಾಷಣ ಮಾಡಿದ್ದ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಇಂದು ಶಾಂತಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಕಳೆದ ಭಾನುವಾರ ಈಶಾನ್ಯ ದೆಹಲಿ ಭಾಗದಲ್ಲಿ ಸಿಎಎ ಪ್ರತಿಭಟನೆ ವೇಳೆ ಹಿಂಸಾಚಾರ ಏರ್ಪಟ್ಟಿತ್ತು. ಹಿಂಸಾಚಾರ ತೀವ್ರ ಸ್ವರೂಪ ತಾಳಿ 42 ಜನರು ಮೃತಪಟ್ಟಿದ್ದರು. ನೂರಾರು ಮಂದಿ ಗಾಯಗೊಂಡಿದ್ದರು. ಈ ಹಿಂಸಾಚಾರಕ್ಕೂ ಮೊದಲು ಕಪಿಲ್ ಮಿಶ್ರಾ ದ್ವೇಷ ಭಾಷಣ ಮಾಡಿದ್ದರು. ಈಗ, ದೆಹಲಿ ಹಿಂಸಾಚಾರ ಖಂಡಿಸಿ ಪೀಸ್ ಫೋರಂ ಎನ್ಜಿಒ ಜಂತರ್ ಮಂತರ್ನಲ್ಲಿ ಶಾಂತಿಯುತ ಜಾತಾ ನಡೆಸಿತು. ಇದರಲ್ಲಿ ಕಪಿಲ್ ಮಿಶ್ರಾ ಕೂಡ ಪಾಲ್ಗೊಂಡರು.
ಡೊನಾಲ್ಡ್ ಟ್ರಂಪ್ ಭಾರತಕ್ಕೆ ಆಗಮಿಸಿದ ವೇಳೆ ದೆಹಲಿಯಲ್ಲಿ ಸಿಎಎ ವಿರೋಧಿಸಿ ಭಾರೀ ಪ್ರತಿಭಟನೆ ಏರ್ಪಟ್ಟಿತ್ತು. ಈ ವೇಳೆ ಟ್ವೀಟ್ ಮಾಡಿದ್ದ ಕಪಿಲ್ ಮಿಶ್ರಾ, “ಡೊನಾಲ್ಡ್ ಟ್ರಂಪ್ ಭಾರತದಲ್ಲಿ ಇರುವವರೆಗೆ ಮಾತ್ರ ನಾವು ಶಾಂತಿಯುತವಾಗಿ ವರ್ತಿಸುತ್ತೇವೆ. ನಂತರ ನಾವು ರಸ್ತೆಗೆ ನುಗ್ಗಿ ಸಿಎಎ ಪ್ರತಿಭಟನಾಕಾರರನ್ನು ಓಡಿಸುತ್ತೇವೆ. ಪೊಲೀಸರ ಮಾತನ್ನೂ ಕೇಳುವುದಿಲ್ಲ,” ಎಂದು ಹೇಳಿದ್ದರು. ದ್ವೇಷ ಭಾಷಣ ಮಾಡಿದ್ದಕ್ಕೆ ಅವರನ್ನು ಬಂಧಿಸುವಂತೆ ಆಗ್ರಹ ಕೇಳಿ ಬಂದಿತ್ತು.
ನವದೆಹಲಿಯಲ್ಲಿ ನಡೆಯುತ್ತಿರುವ ಸಿಎಎ ಮತ್ತು ಎನ್ಆರ್ಸಿ ವಿರೋಧಿ ಪ್ರತಿಭಟನೆಯಲ್ಲಿ ಸತ್ತವರ ಸಂಖ್ಯೆ ದಿನದಿಂದ ದಿನಕ್ಕೇರುತ್ತಲೇ ಇದೆ. ಇಲ್ಲಿಯವರೆಗೂ ಈ ಗಲಭೆಯಲ್ಲಿ 42 ಮಂದಿ ಸಾವನ್ನಪ್ಪಿದ್ದಾರೆ. ಹಾಗೆಯೇ 123 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದ್ದು, 630 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Comments are closed.