ನವದೆಹಲಿ: ಜೆಟ್ ಏರ್ ವೇಸ್ ಮಾಜಿ ಅಧ್ಯಕ್ಷ ನರೇಶ್ ಗೋಯಲ್ ಅವರ ನಿವಾಸದಲ್ಲಿ ಕಳೆದ ಸಂಜೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ ಶೋಧಕಾರ್ಯ ನಡೆಸಿದ್ದಾರೆ.
ನಂತರ ನರೇಶ್ ಗೋಯಲ್ ಅವರನ್ನು ಇಡಿ ಕಚೇರಿಗೆ ಕರೆಸಿ ಸುಮಾರು 4 ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು. ಈ ವೇಳೆ ಗೋಯಲ್ ಪರ ವಕೀಲರು ಹಾಜರಿದ್ದರು. ರಾತ್ರಿ 9 ಗಂಟೆ ವೇಳೆಗೆ ಅವರ ಮುಂಬೈ ನಿವಾಸಕ್ಕೆ ಕರೆದುಕೊಂಡು ಹೋಗಲಾಯಿತು ಎಂದು ತಿಳಿದುಬಂದಿದೆ.
ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಜಾರಿ ನಿರ್ದೇಶನಾಲಯ ಗೋಯಲ್ ವಿರುದ್ಧ ಹೊಸ ಕೇಸು ದಾಖಲಿಸಿದ್ದು, ಈ ಸಂಬಂಧ ನಿನ್ನೆ ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ. ಈ ಹಿಂದೆ ಕೂಡ ಜಾರಿ ನಿರ್ದೇಶನಾಲಯದಿಂದ ಅಕ್ರಮ ಹಣ ವರ್ಗಾವಣೆ ಸಂಬಂಧ ಗೋಯಲ್ ಮತ್ತು ಅವರ ಪತ್ನಿಯನ್ನು ಹಲವು ಬಾರಿ ನಿರ್ದೇಶನಾಲಯ ವಿಚಾರಣೆಗೊಳಪಡಿಸಿತ್ತು.
ಇತ್ತೀಚೆಗೆ ನರೇಶ್ ಗೋಯಲ್ ಮತ್ತು ಅವರ ಪತ್ನಿ ಅನಿತಾ ವಿರುದ್ಧ ಮುಂಬೈ ಪೊಲೀಸರು ಮುಂಬೈ ಮೂಲದ ಪ್ರವಾಸ ಕಂಪೆನಿಯೊಂದಕ್ಕೆ ಸುಮಾರು 46 ಕೋಟಿ ರೂಪಾಯಿ ವಂಚನೆ ಎಸಗಿದ್ದಾರೆ ಎಂಬ ಆರೋಪದ ಮೇಲೆ ಕೇಸು ದಾಖಲಿಸಿದ್ದರು.
Comments are closed.