ಹೊಸದಿಲ್ಲಿ/ ಬೆಂಗಳೂರು: ಕೋವಿಡ್ 19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರು ರವಿವಾರ ಜನತಾ ಕರ್ಫ್ಯೂಗೆ ಕರೆ ನೀಡಿದ್ದು, ಇದಕ್ಕೆ ದೇಶದ ಎಲ್ಲ ರಾಜ್ಯಗಳೂ ಸಹಮತ ವ್ಯಕ್ತಪಡಿಸಿವೆ. ಹೀಗಾಗಿ ರವಿವಾರ ಇಡೀ ಭಾರತ ಸ್ತಬ್ಧವಾಗುವುದು ಖಚಿತ. ಈ ನಡುವೆ ಶುಕ್ರವಾರ ಒಂದೇ ದಿನ ದೇಶ ದಲ್ಲಿ 50ಕ್ಕೂ ಹೆಚ್ಚು ಹೊಸ ಸೋಂಕು ಪ್ರಕರಣ ಪತ್ತೆಯಾಗಿದ್ದು, ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದೆ.
ದಿನದಿಂದ ದಿನಕ್ಕೆ ಭಾರತದಲ್ಲಿ ಕೋವಿಡ್ 19 ಭೀತಿ ಹೆಚ್ಚಾಗುತ್ತಿದೆ. ಶುಕ್ರವಾರ ಒಂದೇ ದಿನ ಸೋಂಕು ಪೀಡಿತರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ. ಶುಕ್ರವಾರವೇ ಸುಮಾರು 50ಕ್ಕೂ ಹೆಚ್ಚು ಪ್ರಕರಣ ದೃಢಪಟ್ಟಿವೆ. ಕೇರಳದಲ್ಲಿ ಹೊಸದಾಗಿ 12 ಪ್ರಕರಣ ಪತ್ತೆಯಾಗಿದ್ದು, ಇವರಲ್ಲಿ ಆರು ಮಂದಿ ಇಂಗ್ಲೆಂಡ್‌ನಿಂದ ಬಂದವರು ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ಮಹಾರಾಷ್ಟ್ರದಲ್ಲಿ 52ಕ್ಕೂ ಹೆಚ್ಚು ಪ್ರಕರಣ ದೃಢಪಟ್ಟಿದ್ದು, ಮುಂಬಯಿ, ಪುಣೆ ಮತ್ತು ನಾಗಪುರಗಳನ್ನು ಸಂಪೂರ್ಣವಾಗಿ ಲಾಕ್‌ಡೌನ್ ಮಾಡಲಾಗಿದೆ. ದಿಲ್ಲಿಯಲ್ಲಿಯೂ 17 ಪ್ರಕರಣ ಪತ್ತೆಯಾಗಿದ್ದು, ಉತ್ತರ ಪ್ರದೇಶದಲ್ಲಿ ಸೋಂಕು ಪೀಡಿತರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ.
2.50 ಲಕ್ಷಕ್ಕೇರಿದ ಸೋಂಕು ಪೀಡಿತರ ಸಂಖ್ಯೆ
ಜಾಗತಿಕ ಮಟ್ಟದಲ್ಲಿ ಕೋವಿಡ್ 19 ಸೋಂಕು ಪೀಡಿತರ ಸಂಖ್ಯೆ 2,50,856 ದಾಟಿದೆ. ಸಾವನ್ನಪ್ಪಿದವರ ಸಂಖ್ಯೆಯೂ 10 ಸಾವಿರ ಮೀರಿದೆ. ಸಾವನ್ನಪ್ಪಿದವರ ಲೆಕ್ಕಾಚಾರದಲ್ಲಿ ಇಟಲಿಯು ಚೀನವನ್ನೂ ಮೀರಿಸಿದೆ. ಇಲ್ಲಿ ಸೋಂಕು ಪೀಡಿತರ ಸಂಖ್ಯೆ 41,035 ಆಗಿದ್ದರೆ, ಸಾವನ್ನಪ್ಪಿದವರ ಸಂಖ್ಯೆ 3,405 ಆಗಿದೆ. ಚೀನದಲ್ಲಿ ಮೃತಪಟ್ಟವರ ಸಂಖ್ಯೆ 3,249ಕ್ಕೆ ಏರಿದೆ. ಯೂರೋಪ್‌ನಲ್ಲಿ ಮೃತರ ಸಂಖ್ಯೆ 5,000 ದಾಟಿದೆ.
ರಾಜ್ಯದಲ್ಲಿ ಹೊಸ ಪ್ರಕರಣವಿಲ್ಲ
ಕರ್ನಾಟಕದ ಮಟ್ಟಿಗೆ ಶುಕ್ರವಾರ ಒಂದಷ್ಟು ಆಶಾಭಾವ ಹುಟ್ಟಿಸಿದ ದಿನ. ದೇಶಾದ್ಯಂತ ಶುಕ್ರವಾರ ಹೊಸದಾಗಿ 50ಕ್ಕೂ ಹೆಚ್ಚು ಪ್ರಕರಣ ದೃಢವಾದರೂ ಕರ್ನಾಟಕದಲ್ಲಿ ಮಾತ್ರ ಯಾವುದೇ ಹೊಸ ಪ್ರಕರಣ ದಾಖಲಾಗಿಲ್ಲ. ಜತೆಗೆ ಸೋಂಕಿನಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದ ಟೆಕ್ಕಿಯೊಬ್ಬರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ.
ಕೇರಳವು ಕರ್ನಾಟಕದ ಜತೆಗಿನ ಗಡಿಯನ್ನು ಬಂದ್ ಮಾಡಿದೆ. ಹಾಗೆಯೇ ತಮಿಳುನಾಡು ಕೂಡ ಶನಿವಾರದಿಂದ ಕರ್ನಾಟಕ, ಕೇರಳ ಮತ್ತು ಆಂಧ್ರಪ್ರದೇಶಗಳ ಜತೆಗಿನ ಗಡಿಯನ್ನು ಮುಚ್ಚಿದೆ.
ಕಾಸರಗೋಡು: ಮತ್ತೆ 6 ಮಂದಿಗೆ ಸೋಂಕು ದೃಢ
ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ ಆರು ಮಂದಿಗೆ ಕೋವಿಡ್ 19 ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 8ಕ್ಕೇರಿದೆ. ಕೊರೊನಾ ಪತ್ತೆಯಾದ ಕಾಸರಗೋಡಿನ ವ್ಯಕ್ತಿಯೊಬ್ಬ ಹಲವೆಡೆ ತೆರಳಿರುವುದು ಆತಂಕಕ್ಕೆ ಕಾರಣವಾಗಿದೆ.
ಕೊಡಗು: 1,054 ಮಂದಿಗೆ ಸಂಪರ್ಕ ನಿಷೇಧ
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕೇತುಮೊಟ್ಟೆ ಗ್ರಾಮದ ವ್ಯಕ್ತಿಯೊಬ್ಬರಿಗೆ ಕೋವಿಡ್ 19 ತಗಲಿರುವ ಹಿನ್ನೆಲೆಯಲ್ಲಿ ಈ ಗ್ರಾಮದ 500 ಮೀ. ವ್ಯಾಪ್ತಿಯ ಭೌಗೋಳಿಕ ಪ್ರದೇಶವನ್ನು ನಿರ್ಬಂಧಿತ ಪ್ರದೇಶ (ಕಂಟೈನ್‌ಮೆಂಟ್ ಏರಿಯಾ) ಎಂದು ಘೋಷಿಸಿ ಕೊಡಗು ಆದೇಶಿಸಿದ್ದಾರೆ.
ಉಡುಪಿ: ಮತ್ತೆ ನಾಲ್ಕು ಮಂದಿ ಆಸ್ಪತ್ರೆಗೆ ದಾಖಲು
ಶಂಕಿತ ಕೋವಿಡ್ 19 ಲಕ್ಷಣ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಮತ್ತೆ ನಾಲ್ಕು ಮಂದಿ ಶುಕ್ರವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಹ್ರೈನ್, ಆಸ್ಟ್ರೇಲಿಯಾದಿಂದ ತಲಾ ಒಬ್ಬರು, ಸೌದಿ ಅರೇಬಿಯಾದಿಂದ ಬಂದ ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದು, ರೋಗಿಗಳ ಗಂಟಲಿನ ದ್ರವದ ಮಾದರಿಯನ್ನು ಹಾಸನಕ್ಕೆ ಕಳುಹಿಸಲಾಗಿದೆ.
ಕರಾವಳಿಯಲ್ಲಿ ಅಘೋಷಿತ ಬಂದ್ ಸಾಧ್ಯತೆ
ಕೋವಿಡ್ 19 ಭೀತಿ ಹೆಚ್ಚಾಗುತ್ತಿರುವುದರಿಂದ ಸುರಕ್ಷತಾ ಕ್ರಮಗಳನ್ನು ಜನರು ಕೈಗೊಳ್ಳುವ ಇರಾದೆ ಯಿಂದ ರವಿವಾರ ಜನತಾ ಕರ್ಫ್ಯೂ ಆಚರಿಸುವಂತೆ ಪ್ರಧಾನಿ ಮೋದಿ ಕರೆಗೆ ದ.ಕ., ಉಡುಪಿ ಮತ್ತು ಕೊಡುಗು ಜಿಲ್ಲೆಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಕರಾವಳಿಯಾದ್ಯಂತ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಲಿದೆ.
ಜನತಾ ಕರ್ಫ್ಯೂ
ಕೋವಿಡ್ 19 ಸೋಂಕು ಪ್ರಸರಣ ತಡೆಗಟ್ಟಲು ರಾಜ್ಯ ಸರಕಾರ ಎಲ್ಲ ರೀತಿಯ ಪ್ರಯತ್ನ ನಡೆಸುತ್ತಿದ್ದು, ರವಿವಾರ ಪ್ರಧಾನಿ ಮೋದಿ ಸೂಚನೆ ಮೇರೆಗೆ ಜನತಾ ಕರ್ಫ್ಯೂ ಆಚರಣೆಗೆ ನಿರ್ಧರಿಸಿದೆ. ಅಂದು ಸಾರ್ವಜನಿಕರಿಗೆ ಅಗತ್ಯ ಸೇವೆಗಳ ಹೊರತಾಗಿ ಬಹುತೇಕ ಕಡೆಗಳಲ್ಲಿ ನಿರ್ಬಂಧ ವಿಧಿಸಲಾಗುತ್ತದೆ.
ಏನೇನು ಸಿಗುತ್ತದೆ?
ಹಾಲು, ತರಕಾರಿ, ಹಣ್ಣು, ಹೊಟೇಲ್, ಬಸ್ ಸಂಚಾರ (ಭಾಗಶಃ), ಆಟೋ, ಕ್ಯಾಬ್
ದ.ಕ. ಗಡಿ ಬಂದ್
ಕಾಸರಗೋಡು ಮತ್ತು ಮಂಗಳೂರು ನಡುವೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಂಚರಿಸುವ ಕಾರಣ ಮುಂಜಾಗ್ರತಾ ಕ್ರಮವಾಗಿ ಎಲ್ಲ ವಾಹನಗಳ ಸಂಚಾರ ನಿಷೇಧಿಸಿ ದ.ಕ. ಡಿಸಿ ಆದೇಶ ಹೊರಡಿಸಿದ್ದಾರೆ.
ಪ್ರಯಾಣಿಕರ ರೈಲು ಇಲ್ಲ
ಶನಿವಾರ ಮಧ್ಯರಾತ್ರಿಯಿಂದಲೇ ಪ್ರಯಾಣಿಕರ ರೈಲು ಸಂಚಾರ ಸ್ತಬ್ಧ ಮಾಡಲು ರೈಲ್ವೇ ಇಲಾಖೆ ನಿರ್ಧರಿಸಿದೆ. ಹಾಗೆಯೇ ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳ ಸಂಚಾರವೂ ರವಿವಾರ ಬೆಳಗಿನ ಜಾವ 4 ಗಂಟೆಗೆ ಸ್ಥಗಿತಗೊಳ್ಳಲಿವೆ. ಅತಿ ಕಡಿಮೆ ಪ್ರಮಾಣದಲ್ಲಿ ಸಬ್‌ಅರ್ಬನ್ ರೈಲುಗಳ ಸಂಚಾರವಿರುತ್ತದೆ ಎಂದು ರೈಲ್ವೇ ಇಲಾಖೆ ಹೇಳಿದೆ.
Comments are closed.