ರಾಷ್ಟ್ರೀಯ

ಮಾರ್ಚ್ 31ರವರೆಗೆ ದೇಶಾದ್ಯಂತ ಬಂದ್; ಅಂತಾರಾಜ್ಯ ಬಸ್, ರೈಲು, ವಾಹನ ಸಂಚಾರ ಸ್ಥಗಿತ

Pinterest LinkedIn Tumblr

ನವದೆಹಲಿ: ಕೊರೋನಾ ವೈರಸ್ ವಿರುದ್ಧ ಹೋರಾಟದ ಭಾಗವಾಗಿ ಪ್ರಧಾನಿ ಮೋದಿ ಕರೆ ನೀಡಿದ ಜನತಾ ಕರ್ಫ್ಯೂಗೆ ದೇಶಾದ್ಯಂತ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿರುವ ಹಿನ್ನೆಲೆಯಲ್ಲಿ ಹಾಗೂ ಕೋವಿಡ್-19 ರೋಗ ದೊಡ್ಡ ಮಟ್ಟಕ್ಕೆ ಉಲ್ಬಣಿಸುವ ಅಪಾಯ ಇರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಇನ್ನಷ್ಟು ದಿನಗಳ ಕಾಲ ನಿರ್ಬಂಧಗಳನ್ನ ಮುಂದುವರಿಸಲು ನಿರ್ಧರಿಸಿದೆ. ಮಾರ್ಚ್ 31ರವರೆಗೆ ದೇಶಾದ್ಯಂತ ಬಂದ್ ಮಾಡಲು ತೀರ್ಮಾನಿಸಿದೆ. ಇಂದು ಪ್ರಧಾನಿಯ ಮುಖ್ಯ ಕಾರ್ಯದರ್ಶಿ ಅವರು ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಜೊತೆ ಸಭೆ ನಡೆಸಿ ಪರಿಸ್ಥಿತಿ ಅವಲೋಕಿಸಿದ ಬಳಿಕ ಈ ನಿರ್ಧಾರಕ್ಕೆ ಬಂದರು.

ಮಾರ್ಚ್ 31ರವರೆಗೆ ಸಂಚಾರ ನಿರ್ಬಂಧಗಳನ್ನ ಹಾಕುವುದು; ಪ್ರಕರಣಗಳು ಬೆಳಕಿಗೆ ಬಂದಿರುವ ಪ್ರದೇಶಗಳಲ್ಲಿ ಅಗತ್ಯ ಸೇವೆ ಹೊರತುಪಡಿಸಿ ಮಿಕ್ಕೆಲ್ಲವನ್ನೂ ಬಂದ್ ಮಾಡುವುದೆಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಸರಕು ಸಾಗಣೆ ರೈಲು ಹೊರತುಪಡಿಸಿ ಉಳಿದೆಲ್ಲಾ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಮೆಟ್ರೋ ರೈಲು, ಸಬರ್ಬನ್ ರೈಲು ಸೇವೆಯನ್ನು ಮಾ. 31ರವರೆಗೆ ನಿಲ್ಲಿಸಲಾಗಿದೆ. ಅಂತಾರಾಜ್ಯ ಬಸ್ ಮತ್ತಿತರ ವಾಹನಗಳ ಸಂಚಾರಕ್ಕೂ ಬ್ರೇಕ್ ಹಾಕಲಾಗಿದೆ.

ಕೋವಿಡ್-19 ಪ್ರಕರಣಗಳು ಈವರೆಗೆ ಬೆಳಕಿಗೆ ಬಂದಿರುವ 75 ಜಿಲ್ಲೆಗಳಲ್ಲಿ ಅಗತ್ಯ ಸಂಚಾರ ಸೇವೆಗೆ ಮಾತ್ರ ಅನುಮತಿ ಕೊಡಲು ನಿರ್ಧರಿಸಲಾಗಿದೆ. ಆಯಾ ರಾಜ್ಯಗಳು ಪರಿಸ್ಥಿತಿಗೆ ಅನುಗುಣವಾಗಿ ಈ ಜಿಲ್ಲೆಗಳ ಪಟ್ಟಿಯನ್ನು ಹೆಚ್ಚಿಸುವ ಸ್ವಾತಂತ್ರ್ಯ ಹೊಂದಿಗೆ ಎಂದು ಕಾರ್ಯದರ್ಶಿಗಳ ಸಭೆಯಲ್ಲಿ ತಿಳಿಸಲಾಗಿದೆ.

ಪ್ರಧಾನಿ ಮೋದಿ ಕರೆ ನೀಡಿದ ಜನತಾ ಕರ್ಫ್ಯೂಗೆ ದೇಶಾದ್ಯಂತ ಉತ್ತಮ ಸ್ಪಂದನೆ ಸಿಕ್ಕಿದೆ. ಬಹುತೇಕ ಎಲ್ಲಾ ಕಡೆ ರಸ್ತೆಗಳು ಬಿಕೋ ಎನ್ನುತ್ತಿವೆ. ಅಂಗಡಿ ಮುಂಗಟ್ಟುಗಳು ಬಾಗಿಲು ಮುಚ್ಚಿವೆ. ಜನ ಸಂಚಾರ ಕೂಡ ವಿರಳವೆಂಬಂತಿದೆ. ಚೀನಾದಲ್ಲಿ ಉದ್ಭವಿಸಿದ ಕೊರೋನಾ ವೈರಸ್​ನ ಸೋಂಕು ಭಾರತಕ್ಕೂ ಹರಡಿದ್ದು ಈವರೆಗೆ 6 ಮಂದಿ ಇಲ್ಲಿ ಬಲಿಯಾಗಿದ್ದಾರೆ. 300ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದೆ. ವಿಶ್ವಾದ್ಯಂತ 12 ಸಾವಿರಕ್ಕೂ ಹೆಚ್ಚು ಮಂದಿ ಈ ಮಹಾಮಾರಿಗೆ ಬಲಿಯಾಗಿದ್ದಾರೆ. ಭಾರತದಲ್ಲಿ ಸರಿಯಾದ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಬಹಳ ವಿಷಮ ಪರಿಸ್ಥಿತಿ ಎದುರಾಗಬಹುದು. ಲಕ್ಷಾಂತರ ಮಂದಿಯ ಪ್ರಾಣಕ್ಕೆ ಕುತ್ತು ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರಗಳು ಸಾಕಷ್ಟು ಬಿಗಿ ಕ್ರಮಗಳನ್ನ ಕೈಗೊಳ್ಳುತ್ತಿವೆ.

Comments are closed.