ಲಕ್ನೋ: ಸಿಎಎ ಮತ್ತು ಎನ್ಆರ್ಸಿ ವಿರುದ್ಧ ಐತಿಹಾಸಿಕ ಗೋಪುರದ ಸುತ್ತ ಧರಣಿ ನಡೆಸುತ್ತಿರುವ ಮಹಿಳಾ ಪ್ರತಿಭಟನಾಕಾರರು ಕೊರೋನಾವೈರಸ್ ಹಿನ್ನೆಲೆಯಲ್ಲಿ ತಮ್ಮ ಧರಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ.
66 ದಿನಗಳಿಂದ ನಡೆಯುತ್ತಿದ್ದ ಪ್ರತಿಭಟನೆಯನ್ನು ಸೋಮವಾರ ಮುಂಜಾನೆ ಸ್ಥಗಿತಗೊಳಿಸಲಾಗಿದೆ ಮತ್ತು ಪ್ರತಿಭಟನಾಕಾರರು ತಮ್ಮ ಮನೆಗಳಿಗೆ ಹಿಂತಿರುಗಿದ್ದಾರೆ. ಅಲ್ಲದೆ ಮಹಿಳೆಯರು ತಮ್ಮ ದುಪ್ಪಟ್ಟವನ್ನು ಆ ಸ್ಥಳದಲ್ಲಿಯೇ ಬಿಡುವ ಮೂಲಕ ಮರಳಿ ಬರುತ್ತೇವೆ ಎಂಬ ಸಂದೇಶವನ್ನು ನೀಡಿದ್ದಾರೆ .
ಮಹಿಳಾ ಪ್ರತಿಭಟನಾಕಾರರು ಪೊಲೀಸ್ ಆಯುಕ್ತರಿಗೆ ಪತ್ರವನ್ನು ಸಲ್ಲಿಸಿದ್ದು, ಪೌರತ್ವ (ತಿದ್ದುಪಡಿ) ಕಾಯ್ದೆ, ರಾಷ್ಟ್ರೀಯ ನಾಗರೀಕರ ನೋಂದಣಿ (ಎನ್ಆರ್ಸಿ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್) ವಿರುದ್ಧ ನಡೆಸುತ್ತಿರುವ ತಮ್ಮ 66 ದಿನಗಳ ಪ್ರತಿಭಟನೆಯನ್ನು ಸ್ಥಗಿತಗೊಳಿಸುತ್ತಿರುವುದಾಗಿ ತಿಳಿಸಿದ್ದಾರೆ.
ಪ್ರತಿಭಟನೆಯನ್ನು ಸ್ಥಗಿತಗೊಳಿಸಿರುವ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಕವಿ ಮುನಾವ್ವರ್ ರಾಣಾ ಅವರ ಪುತ್ರಿ ಸುಮ್ಮಯ್ಯ ರಾಣಾ, “ಭಾರತಕ್ಕೆ ಬಂದಿರುವ COVID-19 ಸಾಂಕ್ರಾಮಿಕ ರೋಗದಿಂದಾಗಿ ಘಂಟಘರ್ ಪ್ರತಿಭಟನೆಯನ್ನು ನಿಲ್ಲಿಸಲು ನಾವು ನಿರ್ಧರಿಸಿದ್ದೇವೆ” ಎಂದು ಹೇಳಿದರು.
ಸಿಎಎ ಮತ್ತು ಎನ್ಆರ್ಸಿ ನಮ್ಮ ದೇಶದ ಆಂತರಿಕ ಸಮಸ್ಯೆಗಳಾಗಿದ್ದು, ದೇಶದ ಪರಿಸ್ಥಿತಿ ಮೊದಲಿನಂತೆ ಆದ ನಂತರ ಮತ್ತೊಮ್ಮೆ ಇದರ ವಿರುದ್ಧ ಪ್ರತಿಭಟಿಸುತ್ತೇವೆ. ಈ ಪ್ರತಿಭಟನೆಯನ್ನು ಸ್ಥಗಿತಗೊಳಿಸುವುದಕ್ಕೆ ಮುಖ್ಯ ಕಾರಣವೆಂದರೆ ಬೃಹತ್ ಸಭೆಗಳಲ್ಲಿ ಹೆಚ್ಚು ಜನರು ಸೇರಿದರೆ ವೈರಸ್ ಹರಡುತ್ತದೆ ಹಾಗಾಗಿ ನಾವು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ, ”ಎಂದು ಅವರು ಹೇಳಿದರು.
ಪ್ರತಿಭಟನಾಕಾರರು ಈಗಾಗಲೇ ಲಕ್ನೋ ಪೊಲೀಸ್ ಆಯುಕ್ತ ಸುಜಿತ್ ಪಾಂಡೆ ಅವರೊಂದಿಗೆ ಮಾತುಕತೆ ನಡೆಸಿದ್ದು, ಪ್ರತಿಭಟನೆಯನ್ನು ಕೆಲವು ದಿನಗಳವರೆಗೆ ನಿಲ್ಲಿಸುವಂತೆ ಸೂಚಿಸಿದ್ದರು ಎಂದು ರಾಣಾ ಹೇಳಿದ್ದಾರೆ.
ಸರ್ಕಾರವು ಜಾರಿಗೊಳಿಸಿರುವ ಲಾಕ್ಡೌನ್ ಮುಗಿದ ನಂತರ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ಅವರು ಹೇಳಿದರು.
ಶಾಹೀನ್ ಬಾಗ್ ಮಾದರಿಯಲ್ಲಿ ಪ್ರಾರಂಭವಾದ ಘಂಟಘರ್ ಪ್ರತಿಭಟನೆ ಕಳೆದ 66 ದಿನಗಳಿಂದ ನಡೆಯುತ್ತಿದೆ. ಸಿಎಎ ಮತ್ತು ಎನ್ಆರ್ಸಿ ವಿರುದ್ಧದ ಪ್ರತಿಭಟನೆಯನ್ನು ಆರಂಭದಲ್ಲಿ ಬೆರಳೆಣಿಕೆಯಷ್ಟು ಮಹಿಳೆಯರು ಪ್ರಾರಂಭಿಸಿದರು ಆದರೆ ನಂತರ ಸಾವಿರಾರು ಜನರು ತಮ್ಮ ಮಕ್ಕಳೊಂದಿಗೆ ಬಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
ಪ್ರತಿಭಟನಾ ನಿರತ ಮಹಿಳೆಯರ ವಿರುದ್ಧ ಹಲವಾರು ಎಫ್ಐಆರ್ಗಳನ್ನು ಸಹ ದಾಖಲಿಸಲಾಗಿತ್ತು. ಆದರೆ ಅದು ಪ್ರತಿಭಟನಾ ನಿರತ ಮಹಿಳೆಯರ ಧೈರ್ಯವನ್ನು ಕುಗ್ಗಿಸಲಿಲ್ಲ. ಘಂಟಘರ್ ಪ್ರತಿಭಟನೆಗೆ ಬಾಲಿವುಡ್ ನಟರು ವಕೀಲರು, ರಾಜಕಾರಣಿಗಳು ಮತ್ತು ಧಾರ್ಮಿಕ ಮುಖಂಡರು ಸಹ ಬೆಂಬಲವನ್ನು ನೀಡಿದ್ದಾರೆ.
Comments are closed.