ಭುವನೇಶ್ವರ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ನಾಲ್ಕು ತಿಂಗಳ ಸಂಬಳವನ್ನು ಮುಂಗಡವಾಗಿ ಪಾವತಿಸಲಾಗುವುದು ಎಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಘೋಷಿಸಿದ್ದಾರೆ.
ಕೊರೊನಾ ವಿರುದ್ಧದ ಹೋರಾಟದಲ್ಲಿ ವೈದ್ಯರು, ನರ್ಸ್, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಎಲ್ಲ ಸರ್ಕಾರಿ ವೈದ್ಯಕೀಯ ವೃತ್ತಿಪರರು ಭಾಗಿಯಾಗಿದ್ದಾರೆ. ಅವರಿಗೆ ಎಪ್ರಿಲ್, ಮೇ, ಜೂನ್, ಜುಲೈ ಸೇರಿ ಒಟ್ಟು ನಾಲ್ಕು ತಿಂಗಳ ಸಂಬಳವನ್ನು ಮುಂಗಡವಾಗಿ ಪಾವತಿಸಲಾಗುವುದು ಎಂದು ಪಟ್ನಾಯಕ್ ತಿಳಿಸಿದ್ದಾರೆ.
ದೇಶದಲ್ಲಿ 584 ಕೊರೊನಾ ಸೋಂಕು ಪತ್ತೆಯಾಗಿದ್ದು, ಒಡಿಸಾದಲ್ಲಿ ಇದುವರೆಗೂ ಇಬ್ಬರಲ್ಲಿ ಸೋಂಕು ಕಂಡು ಬಂದಿದೆ. ಕೊರೊನಾ ವಿರುದ್ಧ ಹೋರಾಟದಲ್ಲಿರುವ ವೈದ್ಯರು, ವೃತ್ತಿಪರ ವೈದ್ಯಕೀಯ ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿ ಕಾರ್ಯವನ್ನು ಶ್ಲಾಘಿಸಿದರು. ವೈದ್ಯರು, ಪೊಲೀಸರ ಕಾರ್ಯಕ್ಕೆ ಅಡ್ಡಿಪಡಿಸುವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನೂ ನೀಡಿದ್ದಾರೆ.
ಇದಲ್ಲದೇ ತಮ್ಮ ಮೂರು ತಿಂಗಳ ಸಂಬಳವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ್ದು, ಶಾಸಕರಿಗೂ ನೆರವಾಗುವಂತೆ ಮನವಿ ಮಾಡುತ್ತೇನೆ ಎಂದರು. ಜೊತೆಗೆ ಕೊರೊನಾ ಸಂಕಷ್ಟಕ್ಕೆ ರಾಜ್ಯದ ಜನರು ನೆರವಾಗಬೇಕಿದ್ದು, ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡುವಂತೆ ಪಟ್ನಾಯಕ್ ಮನವಿ ಮಾಡಿದ್ದಾರೆ.
Comments are closed.