ಗಾಂಧಿನಗರ: ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಪದೇ ಪದೇ ಹೊಗಳಿದ್ದಕ್ಕೆ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಗುಜರಾತ್‍ನ ರಾಜ್‍ಕೋಟ್‍ನಲ್ಲಿ ನಡೆದಿದೆ.
ನಿಲೇಶ್ ಮಾವಿ (19) ಕೊಲೆಯಾದ ಯುವಕ. ಜಮ್‍ನಗರದ ಧ್ರೋಲ್ ತಾಲೂಕಿನ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ. ಆರೋಪಿ ರಾಕೇಶ್ ದಾಮೋರ್ ಕೊಲೆ ಮಾಡಿದ್ದನು. ಮಾರ್ಚ್ 22 ರಂದು ಖಜುರ್ಡಿ ಗ್ರಾಮದ ಸಮೀಪ ರಾಜ್‍ಕೋಟ್-ಜಾಮ್‍ನಗರ ಹೆದ್ದಾರಿಯ ರಸ್ತೆ ಬದಿಯಲ್ಲಿ ನಿಲೇಶ್ ಮಾವಿಯ ಶವ ಪತ್ತೆಯಾಗಿತ್ತು.
ಏನಿದು ಪ್ರಕರಣ?
ಮಾವಿ ಖಜೂರ್ಡಿ ಗ್ರಾಮದ ಪರಿಚಯಸ್ಥರ ಜಮೀನಿಗೆ ಹೋಗಿದ್ದನು. ಅಲ್ಲಿ ಆರೋಪಿ ದಾಮೋರ್ ಸಹ ತನ್ನ ಹೆಂಡತಿಯೊಂದಿಗೆ ವಾಸಿಸುತ್ತಿದ್ದನು. ತುಂಬಾ ದಿನಗಳ ನಂತರ ಸ್ನೇಹಿತ ಸಿಕ್ಕಿದ ಖುಷಿಯಲ್ಲಿ ಇಬ್ಬರು ಮಾತನಾಡುತ್ತಿದ್ದರು. ಈ ವೇಳೆ ಮೃತ ಮಾವಿ, ದಾಮೋರ್ ಪತ್ನಿಯನ್ನ ಹೊಗಳಿದ್ದಾನೆ. ಅಷ್ಟಕ್ಕೆ ಸುಮ್ಮನಾಗದೇ ಪದೇ ಪದೇ ಆತನ ಪತ್ನಿಯನ್ನು ವರ್ಣಿಸುತ್ತಿದ್ದನು ಇದರಿಂದ ದಾಮೋರ್ ಕೋಪಗೊಂಡಿದ್ದನು ಎಂದು ಇನ್ಸ್‌ಪೆಕ್ಟರ್ ಹೇಳಿದ್ದಾರೆ.
ಕೊನೆಗೆ ಮಾವಿಯನ್ನು ಡ್ರಾಪ್ ಮಾಡುವ ನೆಪದಲ್ಲಿ ಆರೋಪಿ ದಾಮೋರ್ ತನ್ನ ಬೈಕಿನಲ್ಲಿ ಕರೆದುಕೊಂಡು ಹೋಗಿದ್ದಾನೆ. ಹೆದ್ದಾರಿಯಲ್ಲಿರುವ ಹೋಟೆಲ್ ಬಳಿ ಹಗ್ಗದಿಂದ ಮಾವಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಮೃತದೇಹವನ್ನು ರಸ್ತೆ ಬದಿಯ ಹಳ್ಳಕ್ಕೆ ಎಸೆದು ಹೋಗಿದ್ದನು. ಮೃತದೇಹ ಪತ್ತೆಯಾದ ನಂತೆ ಪೊಲೀಸರು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದರು. ವರದಿಯಲ್ಲಿ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಬಂದಿತ್ತು.
ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರುಮಾಡಿದ್ದರು. ಆಗ ಮೃತನ ಕುಟುಂಬ ಸದಸ್ಯರನ್ನು ವಿಚಾರಣೆ ಮಾಡಿದ್ದಾರೆ. ಈ ವೇಳೆ ಮಾವಿ ಖಜೂರ್ಡಿ ಗ್ರಾಮದ ಜಮೀನಿಗೆ ಹೋಗಿದ್ದನು ಎಂದು ತಿಳಿದಿದೆ. ಅಂದಿನಿಂದ ಮಗ ಮನೆಗೆ ವಾಪಸ್ ಬಂದಿಲ್ಲ ಎಂದು ಪೋಷಕರು ಸಹ ಹುಡುಕಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆ ಗ್ರಾಮಕ್ಕೆ ಹೋದಾಗ ಆರೋಪಿ ದಾಮೋರ್ ನಡವಳಿಕೆ ಅನುಮಾನಸ್ಪದವಾಗಿ ಕಂಡು ಬಂದಿದೆ. ತಕ್ಷಣ ಪೊಲೀಸರು ಆತನನ್ನು ವಶಪಡಿಸಿಕೊಂಡು ವಿಚಾರಣೆ ಮಾಡಿದ್ದು, ಈ ವೇಳೆ ತಾನೇ ಮಾವಿಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿ ದಾಮೋರ್ ಮಧ್ಯಪ್ರದೇಶದ ತಾಲ್ವಿ ಗ್ರಾಮದ ಮೂಲದನಾಗಿದ್ದು, ಮಂಗಳವಾರ ರಾತ್ರಿ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಅಧಿಕಾರಿಯೊಬ್ಬರು ಹೇಳಿದ್ದಾರೆ.
Comments are closed.